ನವದೆಹಲಿ: ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 12,881 ಮಂದಿಯಲ್ಲಿ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,66,946ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 334 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12237ಕ್ಕೆ ತಲುಪಿದೆ. ಈ ನಡುವೆ 366946 ಮಂದಿ ಸೋಂಕಿತರ ಪೈಕಿ 194325 ಮಂದಿ ಗುಣಮುಖರಾಗಿದ್ದು, ಇನ್ನು ದೇಶದಲ್ಲಿ 160384 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. ಇದೇ ವೇಳೆ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಹಳೆಯ ಕೊರೋನಾ ಸಾವಿನ ಪ್ರಕರಣಗಳನ್ನು ಸೇರಿಸಿದ್ದರಿಂದ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 1,532 ಹಳೆಯ ಸಾವಿನ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 5651ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೆಹಲಿಯಲ್ಲಿ ಹಳೆಯ ಸಾವಿನ ಪ್ರಕರಣಗಳನ್ನು ಸೇರಿಸಿ ಸಾವಿನ ಸಂಖ್ಯೆ 1837ಕ್ಕೆ ಏರಿಕೆಯಾಗಿದೆ. ಮಂಗಳವಾರ 10054 ಮಂದಿ ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕೆಲವೊಂದು ಅನುಮಾನಾಸ್ಪದ ಸಾವಿನ ಪ್ರಕರಣಗಳನ್ನು ಕೊರೋನಾ ಸಾವಿನ ಪ್ರಕರಣಗಳೆಂದು ಪರಿಗಣಿಸಿರಲಿಲ್ಲ. ಇದೀಗ ಲೆಕ್ಕ ಪರಿಶೋಧನೆಯ ವೇಳೆ ಈ ಹಿಂದೆ ದಾಖಲಿಸದೇ ಇದ್ದ 1328 ಕೊರೋನಾ ವೈರಸ್ ಸಾವಿನ ಪ್ರಕರಣಗಳನ್ನು ಪರಿಗಣಿಸಿದ್ದರಿಂದ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಅದೇ ರೀತಿ ದೆಹಲಿಯಲ್ಲೂ ಕೂಡ 344 ಸಾವಿನ ಪ್ರಕರಣಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.


