ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿರುವಂತೆ ಸಮಾಧಾನಕಾರ ಸಂಗತಿಯೊಂದು ಹೊರಬಿದ್ದಿದೆ.ಜನಸಾಂದ್ರತೆ ಹೆಚ್ಚಿದ್ದರೂ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಪ್ರಕರಣಗಳು ವಿಶ್ವಸಂಸ್ಥೆ ಕೊರೋನಾ ಪರಿಸ್ಥಿತಿ ಕುರಿತ ವರದಿಯಲ್ಲಿ ಕಂಡುಬಂದಿವೆ.
ದೇಶದಲ್ಲಿ ಲಕ್ಷ ಜನಸಂಖ್ಯೆಯಲ್ಲಿ ಶೇ. 30. 04 ರಷ್ಟು ಪ್ರಕರಣಗಳು ವರದಿಯಾಗಿದ್ದರೆ,ಜಾಗತಿಕ ಸರಾಸರಿ ಇದಕ್ಕೂ ಮೂರು ಪಟ್ಟು ಅಧಿಕ ಎಂಬಂತೆ 114.67 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಕೋವಿಡ್-19 ರೋಗಿಗಳಲ್ಲಿ ಚೇತರಿಕೆ ಪ್ರಮಾಣ ಶೇ.55.77 ರಷ್ಟಿದೆ ಎಂದು ಹೇಳಿದೆ.
ಸೋಮವಾರ ದೇಶದಲ್ಲಿ 14, 821 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆ ಆಗಿದೆ.ಹೊಸದಾಗಿ 445 ಜನರ ಸಾವಿನೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 13,699ಕ್ಕೆ ಏರಿಕೆಯಾಗಿದೆ.
ಭಾನುವಾರ ದೇಶದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 4 ಲಕ್ಷ ಗಡಿಯನ್ನು ದಾಟಿದ್ದು, ಈವರೆಗೂ 2,37,195 ರೋಗಿಗಳು ಗುಣಮುಖರಾಗಿದ್ದಾರೆ. 1,74,387 ಪ್ರಕರಣಗಳು ಸಕ್ರಿಯವಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.


