ತಿರುವನಂತಪುರ: ರಾಜ್ಯದಲ್ಲಿ ಸ್ಪಷ್ಟ ಮೂಲಗಳಿಲ್ಲದೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವರದಿಗಳ ಪ್ರಕಾರ, ಅರವತ್ತು ಕೋವಿಡ್ ಪ್ರಕರಣಗಳಿಗೆ ಕಾರಣಗಳೇನು ಎನ್ನುವುದು ಅಸ್ಪಷ್ಟವಾಗಿದೆ. ಈ ಕಾರಣದಿಂದ ಈ 60 ಮಂದಿಗೆ ರೋಗ ಹರಡಲು ಕಾರಣವಾದ ಅಂಶದ ಬಗ್ಗೆ ಗಂಭೀರ ಅಧ್ಯಯನ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಣ್ಣೂರಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ನಿನ್ನೆ ಮೃತಪಟ್ಟ ಅಬಕಾರಿ ಅಧಿಕಾರಿಗೆ ಹೇಗೆ ಕೊರೊನಾ ಸೋಂಕು ಹಬ್ಬಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯದ ಆರು ಜಿಲ್ಲೆಗಳಲ್ಲಿ 60 ಕ್ಕೂ ಹೆಚ್ಚು ಮಂದಿಗಳಿಗೆ ಕೋವಿಡ್ ಬಾಧಿಸಿರುವುದರ ಮೂಲ ಪತ್ತೆಯಾಗಿಲ್ಲ. ಅದೂ ಮೇ. 4 ರ ಬಳಿಕ ಇವರಲ್ಲಿ ಸೋಂಕು ಪತ್ತೆಯಾಗಿರುವುದು ವಿಶೇಷತೆಯಾಗಿ ಬೆರಗುಗೊಳಿಸಿದೆ ಎಮದು ಸಿಎಂ ತಿಳಿಸಿದರು.
ರೋಗವನ್ನು ಅಧ್ಯಯನ ಮಾಡಲು ಸಿಎಂ ಸೂಚನೆ:
ವರದಿಗಳ ಪ್ರಕಾರ, ರಾಜ್ಯದಲ್ಲಿ ಸ್ಪಷ್ಟ ಮೂಲಗಳಿಲ್ಲದ ಕೋವಿಡ್ ಸಾಂಕ್ರಾಮಿಕತೆಯನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ರೋಗದ ಅಧ್ಯಯನ ನಡೆಸಲು ಆರೋಗ್ಯ ಇಲಾಖೆ ಜಿಲ್ಲಾ ವೈದ್ಯಕೀಯ ಅಧಿಕಾರಿಗಳನ್ನು ನಿಯೋಜಿಸಿದೆ. ಕೋವಿಡ್ ರೋಗಿಗಳನ್ನು ಗುರುತಿಸಿದ ನಂತರ, ಸಂಪರ್ಕ ಪಟ್ಟಿಯನ್ನು ರಚಿಸುವ ಮೂಲಕ ಮತ್ತು ಜನರ ಜಾಡು ಹಿಡಿಯುವ ಮೂಲಕ ಮೂಲ ಪತ್ತೆಹಚ್ಚಬೇಕಾದ ಗಂಭೀರತೆ ಇದೆ. ಆದರೆ ಮೂಲವನ್ನು ಗುರುತಿಸದ ಪ್ರಕರಣಗಳು ರೋಗಿಯನ್ನು ತಕ್ಷಣ ಗುರುತಿಸಲಾಗದ ಪರಿಸ್ಥಿತಿಗೆ ಕಾರಣವಾಗಬಹುದು ಮತ್ತು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದಿರುವರು.
ಒಂದೇ ತಿಂಗಳಲ್ಲಿ ಮೂಲವಿಲ್ಲದೆ 50 ಪ್ರಕರಣಗಳು:
ಮೇ 4 ರಿಂದ ಜೂನ್ 6 ರವರೆಗೆ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ 49 ಜನರಿಗೆ ಈ ರೋಗ ಎಲ್ಲಿಂದ ಬಂತು ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಕಾಸರಗೋಡಿನ ಆಟೋ ರಿಕ್ಷಾ ಚಾಲಕ, ತಿರುವನಂತಪುರಂನಲ್ಲಿ ನಿಧನರಾದ ಕೆ.ಜಿ.ವರ್ಗೀಸ್ ಮತ್ತು ಅನಾರೋಗ್ಯದಿಂದ ಸಾವನ್ನಪ್ಪಿದ ಅಬ್ದುಲ್ ಕರೀಮ್ ಅವರುಗಳಿಗೆ ಕೋವಿಡ್ ಎಲ್ಲಿಂದ ಹಬ್ಬಿತೆಂಬುದು ಇನ್ನೂ ದೃಢಪಟ್ಟಿಲ್ಲ.
6 ಜಿಲ್ಲೆಗಳಲ್ಲಿ ಮೂಲ ತಿಳಿಯದ ವೈರಸ್ ಬಾಧೆ:
ರಾಜ್ಯದಲ್ಲಿ ಹೆಚ್ಚಿನ ಅಸ್ಪಷ್ಟ ಮೂಲಗಳ ಕೋವಿಡ್ ಪ್ರಕರಣಗಳು ಕಣ್ಣೂರು, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿವೆ. ಮಾರ್ಚ್ 23 ರಿಂದ ಜೂನ್ 6 ರವರೆಗೆ ಸರ್ಕಾರಿ ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಮಾರು 60 ಜನರ ಮೂಲಗಳು ಪತ್ತೆಯಾಗಿಲ್ಲ. ರೋಗದ ಸಾಂಕ್ರಾಮಿಕತೆಯನ್ನು ವೈಜ್ಞಾನಿಕ ತಳಹದಿಯಲ್ಲಿ ಪರಿಶೀಲಿಸಲು ಮುಖ್ಯಮಂತ್ರಿ ತಿಳಿಸಿರುವರು. ಈ ಅಂಕಿಅಂಶಗಳನ್ನು ಐಸಿಎಂಆರ್‍ಗೆ ನೀಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಕೇರಳಕ್ಕೆ ಮರಳಿದವರಿಗೆ ಕೋವಿಡ್!:
ಕೇರಳದಿಂದ ನೆರೆಯ ರಾಜ್ಯಗಳಿಗೆ ಪ್ರಯಾಣಿಸಿ ಮರಳುವಾಗ ಕೋವಿಡ್ ಪರಿಶೀಲನೆ ಕಟ್ಟುನಿಟ್ಟಾಗಿ ನಿರ್ವಹಿಸುತ್ತಿರುವುದರಿಂದ ವ್ಯಾಪಕ ಹರಡುವಿಕೆ ನಿಯಂತ್ರಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ನೋಡುತ್ತಿದೆ. ತಮಿಳುನಾಡು ಮತ್ತು ಕರ್ನಾಟಕಕ್ಕೆ ತೆರಳಿದ ಸುಮಾರು 50 ಜನರಿಗೆ ಆಗಮನದ ನಂತರ ಈ ರೋಗ ಪತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್ ದೃಢಪಟ್ಟವರ ಸಂಖ್ಯೆ ದಿನೇದಿನೇ ಹೆಚ್ಚಳಗೊಳ್ಳುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 1351 ರೋಗಿಗಳಿದ್ದಾರೆ. ಈವರೆಗೆ 1324 ಜನರನ್ನು ಗುಣಪಡಿಸಲಾಗಿದೆ ಎಂದು ಪಿಣರಾಯಿ ವಿಜಯನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


