ಕೊಟ್ಟಾಯಂ: ಶಬರಿಮಲೆ ವಿಮಾನ ನಿಲ್ದಾಣಕ್ಕೆ ಭೂ- ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ವಿಮಾನ ನಿಲ್ದಾಣ ನಿರ್ಮಿಸಲು ಚೆರುಳ್ಳಿ ಎಸ್ಟೇಟ್‍ನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶಿಸಿದೆ. ಕೊಟ್ಟಾಯಂ ಜಿಲ್ಲಾಧಿಕಾರಿಗೆ ಭೂಸ್ವಾಧೀನ ಕಾರ್ಯವನ್ನು ವಹಿಸಲಾಗಿದೆ. ಕಂದಾಯ ಇಲಾಖೆಯಿಂದ ಈ ಆದೇಶ ನೀಡಲಾಗಿದೆ.
ಬುಧವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಶಬರಿಮಲೆಯಲ್ಲಿರುವ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣದೊಂದಿಗೆ ಮುಂದುವರಿಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಯತಿಲಕ ಅವರು ಈ ಆದೇಶ ನೀಡಿರುವರು. ಚೆರುವಳ್ಳಿ ಎಸ್ಟೇಟ್ 2263.13 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುವುದು.
ಈ ಕ್ರಮವು 2013 ರ ಭೂಸ್ವಾಧೀನ ಕಾಯ್ದೆಗೆ ಅನುಗುಣವಾಗಿರುತ್ತದೆ. ಭೂಮಿಗೆ ಸಂಬಂಧಿಸಿ ವ್ಯಾಜ್ಯಗಳಿದ್ದರೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 77 ರ ಅಡಿಯಲ್ಲಿ ನಷ್ಟ ಪರಿಹಾರ ಪಾವತಿಸುವ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ಕಾರವೇ ಭೂಮಿಯನ್ನು ಖರೀದಿಸಿರುವುದರಿಂದ ಹಣವನ್ನು ಪಾವತಿಸುವ ಅಗತ್ಯ ಇಲ್ಲ ಎಂದೂ ತಿಳಿದುಬಂದಿದೆ.


