HEALTH TIPS

ನವೆಂಬರ್ ಮಧ್ಯದ ವೇಳೆಗೆ ಭಾರತದಲ್ಲಿ ಕೊರೋನಾ ಸಮಸ್ಯೆ ತಾರಕಕ್ಕೆ: ಐಸಿಎಂಆರ್ ಆತಂಕಕಾರಿ ಮಾಹಿತಿ

   
     ನವದೆಹಲಿ: ಜಾಗತಿಕ ಪಿಡುಗು, ಮಹಾಮಾರಿ, ಕ್ರೂರಿ ಕೊರೋನಾ ತಂದೊಡ್ಡಿರುವ ಕಡುಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ನವೆಂಬರ್ ಮಧ್ಯ ಭಾಗದಲ್ಲಿ ಕೊರೋನಾ ಸಮಸ್ಯೆ ತಾರರಕ್ಕೇರಲಿದೆ ಎಂಬ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ.
      ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್-19 ಪ್ರಕರಣಗಳ ಸಂಖ್ಯೆ ನವೆಂಬರ್ ಮಧ್ಯದ ವೇಳೆಗೆ ಗರಿಷ್ಠಮಟ್ಟ ಮುಟ್ಟಲಿದೆ. ಆ ವೇಳೆಗೆ ದೇಶದಲ್ಲಿ ಐಸೋಲೇಷನ್ ಹಾಸಿಗೆಗಳು, ತೀವ್ರ ನಿಗಾ ಘಟಕಗಳು ಮತ್ತು ವೆಂಟಿಲೇಟರ್‍ಗಳ ಕೊರತೆ ಉಂಟಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ. ಐಸಿಎಂಆರ್ ರಚನೆ ಮಾಡಿರುವ ಆಪರೇಷನ್ಸ್ ರಿಸರ್ಚ್ ಗ್ರೂಪ್ ನಡೆಸಿದ ಸಾಂಖ್ಯಿಕ ಅಧ್ಯಯನದ ವರದಿಯ ಆಧಾರದ ಮೇಲೆ ಈ ಅಭಿಮತಕ್ಕೆ ಬರಲಾಗಿದೆ.
     ಇಷ್ಟು ದಿನ ಕೆಲ ಸಂಸ್ಥೆಗಳು, ಪ್ರಯೋಗಾಲಯಗಳು, ವಿಶ್ವವಿದ್ಯಾನಿಲಯಗಳು ಕೊರೋನಾ ಬಗ್ಗೆ ಸಮೀಕ್ಷೆ ನಡೆಸಿ ತಮ್ಮದೇಯಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದವು. ಆದರೀಗ ನವೆಂಬರ್ ಮಧ್ಯ ಭಾಗದಲ್ಲಿ ಕೊರೋನಾ ಸಮಸ್ಯೆ ತಾರರಕ್ಕೇರಲಿದೆ ಎಂದು ಐಸಿಎಂರ್ ಭಯಾನಕ ಭವಿಷ್ಯ ನುಡಿದಿದೆ. ಈ ಮೊದಲಿನ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್–19 ಪ್ರಕರಣಗಳ ಸಂಖ್ಯೆಯು ಜುಲೈ ಅಂತ್ಯದ ವೇಳೆಗೆ ಗರಿಷ್ಠಮಟ್ಟ ತಲುಪಬೇಕಿತ್ತು. ಲಾಕ್‍ಡೌನ್‍ನ ಕಾರಣ ಗರಿಷ್ಠಮಟ್ಟ ತಲುಪುವ ಅವಧಿಯು ನವೆಂಬರ್ ಮಧ್ಯದವರೆಗೆ ವಿಸ್ತರಣೆಯಾಗಿದೆ. ಸೋಂಕಿತರ ಸಂಖ್ಯೆ ಶೇ 67–90ರಷ್ಟು ಕಡಿಮೆಯಾಗಿದೆ. ಲಾಕ್‍ಡೌನ್ ಇಷ್ಟರಮಟ್ಟಿಗೆ ಯಶಸ್ವಿಯಾಗಿದೆ. ವಿಸ್ತರಣೆ ಆಗಿರುವ ಹೆಚ್ಚುವರಿ ಅವಧಿಯಲ್ಲಿ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಸಾಕಷ್ಟು ಕಾಲಾವಕಾಶ ದೊರೆತಿದೆ ಎಂದು ತಜ್ಞರು ಹೇಳಿದ್ದಾರೆ.
   ಕೊರೋನಾ ಸಮಸ್ಯೆ ಅರಿಯಲೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಚಿಸಿದ್ದ ಕಾರ್ಯಾಚರಣೆ ಸಂಶೋಧನಾ ಗುಂಪು ಸಂಶೋಧನೆ ನಡೆಸಿ ವರದಿ ಸಲ್ಲಿಸಿದೆ. ಆ ವರದಿ ಪ್ರಕಾರ ಭಾರತದಲ್ಲಿ ಕೊರೋನಾ ಕಷ್ಟ ಇಷ್ಟಕ್ಕೆ ಮುಗಿಯುವುದಿಲ್ಲ. ಸದ್ಯ ಅರ್ಧದಷ್ಟು ಕಷ್ಟವೂ ಕರಗಿಲ್ಲ. ಕೊರೋನಾ ಸಮಸ್ಯೆ ಇರುವುದೇ ಮುಂದಕ್ಕೆ. ಕೊರೋನಾ ನವೆಂಬರ್ ಮಧ್ಯದಲ್ಲಿ ತಾರಕಕ್ಕೇರಲಿದೆ.
     ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಲಾಕ್‍ಡೌನ್ ನೆರವಾಗಿದೆ. ಮೂಲಸೌಕರ್ಯ ಹೆಚ್ಚಾಗಿರುವ ಕಾರಣ ಈ ಕ್ರಮಗಳನ್ನು ಜಾರಿಗೆ ತರಲು ಅನುಕೂಲವಾಗುತ್ತಿದೆ. ಕೋವಿಡ್-19ಗೆ ಲಸಿಕೆ ದೊರೆಯುವವರೆಗೂ ಇವುಗಳನ್ನು ಪಾಲಿಸಬೇಕಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
     ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಚಿಸಿದ್ದ ಕಾರ್ಯಾಚರಣೆ ಸಂಶೋಧನಾ ಗುಂಪಿನ ಅಧ್ಯಯನದ ವರದಿಯಲ್ಲಿ 'ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಕೊರೊನಾ ಸೋಂಕು ಹರಡುವಿಕೆ ಕಡಿಮೆ ಆಗಿದೆ. ಇಲ್ಲದಿದ್ದರೆ ಸೋಂಕಿನ ಪ್ರಮಾಣ 69-97% ರಷ್ಟಾಗುತ್ತಿತ್ತು. ಲಾಕ್ ಡೌನ್ ಜಾರಿ ಮಾಡಿದ್ದರಿಂದ ನಮ್ಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸನ್ನದ್ಧಗೊಳಿಸುವುದಕ್ಕೆ ಸಾಧ್ಯವಾಯಿತು' ಎಂದು ಕೂಡ ಉಲ್ಲೇಖಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries