ಮಂಜೇಶ್ವರ: ಕೋವಿಡ್ ಕಾಲ ಘಟ್ಟ ಮುಗಿಯುವ ತನಕ ಬಸ್ಸಿನ ತ್ರೈಮಾಸಿಕ ತೆರಿಗೆ ಮುಂದೂಡಿ ಬಸ್ಸು ಕಾರ್ಮಿಕರ ಉದ್ಯೋಗವನ್ನು ಸರ್ಕಾರ ಸಂರಕ್ಷಿಸಬೇಕು ಸಹಿತ ಹಲವಾರು ಬೇಡಿಕೆಗಳನ್ನು ಮುಂದಿರಿಸಿ ಕೇರಳ ರಾಜ್ಯ ಬಸ್ ಮಾಲಕರ ಫೆಡರೇಶನ್ ನಿರ್ದೇಶನ ಪ್ರಕಾರ ಮಂಜೇಶ್ವರ ತಾಲೂಕು ಬಸ್ಸು ಮಾಲಿಕರ ಸಂಘದ ಆಶ್ರಯದಲ್ಲಿ ಹೊಸಂಗಡಿಯ ಪೇಟೆಯಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಬಸ್ಸು ಸಂಚಾರಕ್ಕೆ ಅನುಕೂಲ ವ್ಯವಸ್ಥೆ ಕಾರ್ಯಗತಗೊಳಿಸಬೇಕು, ರಿಯಾಯಿತಿ ದರದಲ್ಲಿ ಡೀಸೆಲ್ ಲಭಿಸುವಂತಾಗಬೇಕು,ಬಸ್ ಸುಗಮ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಲೀಕರಿಗೆ ಬಡ್ಡಿ ರಹಿತ ಸಾಲದ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ.
ಧರಣಿಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲೂಕು ಬಸ್ಸು ಮಾಲಿಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಮೀಯಪದವು ವಹಿಸಿದ್ದರು.ಪ್ರ.ಕಾರ್ಯದರ್ಶಿ ತಿಮ್ಮಪ್ಪ ಭಟ್ ಅರಂತಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಧನರಾಜ್ ಸುಭಾಷ್ ನಗರ ಬಸ್ಸು ಮಾಲಕರ ಹಾಗೂ ಕಾರ್ಮಿಕರ ಸಮಸ್ಯೆ ಬಗ್ಗೆ ಮಾತನಾಡಿದರು.
ಬಸ್ಸು ಮಾಲೀಕರ ಸಂಘದ ಕೋಶಾಧಿಕಾರಿ ಉಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ ಯು., ಉಪಾಧ್ಯಕ್ಷ ಎಸ್.ಕೆ.ಹಮೀದ್ ಕಂಚಿಲ, ಬಿ.ಎಂ.ರಾಜೇಶ್ ಮಂಜೇಶ್ವರ, ಯಶವಂತ ಹೊಸಬೆಟ್ಟು, ಚಂದ್ರಹಾಸ ಪೆಲಪ್ಪಾಡಿ, ಕುಂಞÂ್ಞ ಮೋನ್ ಪೈವಳಿಕೆ ಮೊದಲಾದವರು ಭಾಗವಹಿಸಿದ್ದರು.


