ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಸಮುದಾಯದ ಹಂತ ತಲುಪಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜುಲೈ ಕೊನೆಯ ಹೊತ್ತಿಗೆ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆಯಾಗಬಹುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ್ದರಿಂದ ಜನರಲ್ಲಿ ಭಯ, ಆತಂಕ ಉಂಟಾಯಿತು, ಆದರೆ ದೆಹಲಿಯಲ್ಲಿ ಕೊರೋನಾ ಸೋಂಕು ಅಷ್ಟೊಂದು ಹೀನಾಯ ಸ್ಥಿತಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.
ಎ ಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ದೆಹಲಿಯಲ್ಲಿ ಕೊರೋನಾ ವೈರಸ್ ತಡೆಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳೆರಡೂ ಸಮನ್ವಯದಿಂದ ಕೆಲಸ ಮಾಡುತ್ತಿವೆ, ಹಲವು ಹಂತಗಳಲ್ಲಿ ಸಮನ್ವಯತೆ ಹೆಚ್ಚಿಸಲು ಸಭೆಗಳನ್ನು ನಡೆಸಲಾಗಿದೆ. ಕೇಂದ್ರ ಸರ್ಕಾರ ಯಾವತ್ತಿಗೂ ದೆಹಲಿ ಸರ್ಕಾರದ ಜೊತೆಗಿರುತ್ತದೆ ಎಂದರು.
ಜೂನ್ ಎರಡನೆ ವಾರದ ಹೊತ್ತಿಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜುಲೈ 31ರ ವೇಳೆಗೆ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5.50 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಸೌಕರ್ಯವಿಲ್ಲ, ಜಾಗವಿಲ್ಲ, ಆಸ್ಪತ್ರೆಗಳಿಲ್ಲ ಪರಿಸ್ಥಿತಿ ತೀರಾ ಕಠಿಣವಾಗಿದೆ ಎಂದಿದ್ದರು. ಇದು ದೆಹಲಿಯ ಜನತೆಯಲ್ಲಿ ಸಾಕಷ್ಟು ಭಯ ಹುಟ್ಟಿಸಿತು. ಅವರು ಸಂಖ್ಯೆಯನ್ನು ನೋಡಿಕೊಂಡು ಆ ರೀತಿ ಹೇಳಿಕೆ ಕೊಟ್ಟಿದ್ದರು. ಅವರು ಮಾಡಿದ ಅಂದಾಜು ಸರಿಯೇ, ತಪ್ಪೇ ಎಂದು ನಾನು ಹೇಳುವುದಿಲ್ಲ, ಆದರೆ ಜನರಲ್ಲಿ ಎಷ್ಟರ ಮಟ್ಟಿಗೆ ಭಯ ಹುಟ್ಟಿಕೊಂಡಿದೆಯೆಂದರೆ ಕೆಲವರು ದೆಹಲಿ ಬಿಟ್ಟು ಹೋಗುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಮನೀಶ್ ಸಿಸೋಡಿಯಾ ನೀಡಿದ್ದ ಸಂಖ್ಯೆಯನ್ನು ಅಮಿತ್ ಶಾ ಒಪ್ಪಲು ಸಿದ್ದವಿಲ್ಲ. ಜುಲೈ 31ರ ಹೊತ್ತಿಗೆ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆಯಾಗುವುದಿಲ್ಲ ಎಂದು ವಿಶ್ವಾಸದಿಂದ ಶಾ ನುಡಿದರು. ಕೊರೋನಾ ಸೋಂಕಿನ ವಿಚಾರದಲ್ಲಿ ಪ್ರಧಾನಿ ಮೋದಿಯವರು ದೇಶದ ಮುಂದೆ ನಿಖರವಾದುದ್ದನ್ನೇ ತೋರಿಸುತ್ತಿದ್ದಾರೆ, ಹೇಳುತ್ತಿದ್ದಾರೆ ಕೂಡ. ದೆಹಲಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಅವರೇ ಗೃಹ ಸಚಿವಾಲಯಕ್ಕೆ ಸೂಚನೆ ಕೊಟ್ಟಿದ್ದರು. ಸಮನ್ವಯತೆ ಸಾಧಿಸಲು ಕಳೆದ ಜೂನ್ 14ರಂದು ಸಭೆ ಕರೆಯಲಾಗಿತ್ತು ಎಂದರು. ಕೊರೋನಾ ವಿಚಾರದಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಸೋಂಕಿತ ಪತ್ತೆ ಕಾರ್ಯ ತ್ವರಿತವಾಗಿ ನಡೆಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದರು. ದೆಹಲಿಯಲ್ಲಿ ಕೊರೋನಾ ವೈರಸ್ ಸಮುದಾಯ ಹಂತಕ್ಕೆ ತಲುಪಿದೆಯೇ ಎಂದು ಘೋಷಣೆ ಮಾಡುವುದರಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ಮಧ್ಯೆ ಭಿನ್ನಾಭಿಪ್ರಾಯವಿದೆಯೇ ಎಂದು ಕೇಳಿದ್ದಕ್ಕೆ, ಆ ಹಂತಕ್ಕೆ ದೆಹಲಿ ಇನ್ನೂ ತಲುಪಿಲ್ಲ. ಜನರಿಗೆ ಭಯ ಬೇಡ, ಒಂದು ವೇಳೆ ಮುಂದಿನ ದಿನಗಳಲ್ಲಿ ಸಮುದಾಯ ಹಂತ ತಲುಪಿದರೆ ಕೇಂದ್ರ ಸರ್ಕಾರ ಅದನ್ನು ಘೋಷಿಸುವುದಕ್ಕೆ ಹಿಂಜರಿಯುವುದಿಲ್ಲ ಎಂದರು. ದೆಹಲಿಯಲ್ಲಿ ಅಲ್ಲಿನ ನಿವಾಸಿಗಳಿಗೆ ಮಾತ್ರ ಕೋವಿಡ್-19 ಬೆಡ್ ಗಳು ಸೀಮಿತ ಎಂದು ದೆಹಲಿ ಸರ್ಕಾರ ಮಾಡಿರುವ ನಿರ್ಧಾರದ ಬಗ್ಗೆ ಕೂಡ ಮಾತನಾಡಿದ ಅಮಿತ್ ಶಾ, ನಾನು ಕೂಡ ಹೊರಗಿನವನು. ನನಗೆ ಏನಾದರೂ ಆದರೆ ನಾನು ಎಲ್ಲಿಗೆ ಹೋಗಲಿ?ದೆಹಲಿ ರಾಷ್ಟ್ರಕ್ಕೆ ರಾಜಧಾನಿ. ವಿವಿಧ ರಾಜ್ಯಗಳ ಜನರು ಇಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಬಂದು ಹೋಗುತ್ತಾರೆ. ಅವರಲ್ಲಿ ಯಾರಿಗಾದರೂ ಕೋವಿಡ್-19 ಬಂದರೆ ಎಲ್ಲಿಗೆ ಹೋಗಬೇಕು ಚಿಕಿತ್ಸೆ ಪಡೆಯಲು ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಪ್ರತಿ ಕಂಟೈನ್ ಮೆಂಟ್ ಪ್ರದೇಶಗಳ ಮನೆಗಳನ್ನು ಇದೇ 30ರೊಳಗೆ ಸಮೀಕ್ಷೆ ಮಾಡಿ ಜನರನ್ನು ಪರೀಕ್ಷೆಗೊಳಪಡಿಸುವ ಕಾರ್ಯ ತ್ವರಿತಗೊಳಿಸಲಾಗುವುದು ಎಂದರು.


