ಮುಳ್ಳೇರಿಯ: ಕೇರಳ-ಕರ್ನಾಟಕ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಲಾಕ್ ಡೌನ್ ಭಾಗವಾಗಿ ನಿಯಂತ್ರಿಸಿದ ಹಿನ್ನೆಲೆಯಲ್ಲಿ ಅಂತರಾಜ್ಯ ಗಡಿ ರಸ್ತೆಗಳಿಗೆ ಹಾಕಲಾದ ಮಣ್ಣನ್ನು ತೆಗೆಯಲು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ, ಕರ್ನಾಟಕ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಿಜೆಪಿ ನಾಯಕರ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದ ಗಡಿಯಾಗಿರುವ ಕಾಸರಗೋಡು ಜಿಲ್ಲೆಯ ಮುಖ್ಯ ರಸ್ತೆಗಳಲ್ಲಿ ಮಣ್ಣನ್ನು ಕೂಡಲೇ ತೆಗೆಯಲು ಆದೇಶ ಹೊರಡಿಸಲಾಗಿದೆ. ಇದರಲ್ಲಿ ದೇಲಂಪಾಡಿಯ ಬೆಲ್ಲಪ್ಪಾಡಿ, ಪನತ್ತಡಿಯ ಕಲ್ಲಪ್ಪಳ್ಳಿ ಮತ್ತು ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಗೆ ತಾಗಿರುವ ವಿವಿಧ ಭಾಗಗಳ ಗಡಿಗಳನ್ನು ತೆರೆಯಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಜೊತೆಗೆ ಅಂತರ್ ರಾಜ್ಯ ಸಂಚಾರಕ್ಕೂ ಅನುವು ನೀಡಲಾಗಿದೆ. ಆದರೆ ಪಾಸ್ ಅಗತ್ಯವಿದ್ದು, ಪಾಸ್ ರಹಿತ ಸಂಚಾರಕ್ಕೆ ಅನುವು ಮಾಡಲಾಗಿಲ್ಲ.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಬಿಜೆಪಿ ಮುಖಂಡರು ರಸ್ತೆ ತೆರೆಯಲು ಅನುಮತಿ ಕೋರಿ ಗಡಿ ಗ್ರಾಮಗಳ ಜನರ ಬವಣೆಯನ್ನು ಪರಸ್ಪರ ಹಂಚಿದ್ದರ ಪರಿಣಾಮ ಗಡಿ ತೆರೆಯಲು ಈ ಮೂಲಕ ಸಚಿವರ ನೇತೃತ್ವದಲ್ಲಿ ತೀರ್ಮಾನಕೈಗೊಳ್ಳಲಾಗಿದೆ.
ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮತ್ತವರೊಂದಿಗಿನ ನಿಯೋಗ ಕಳೆದ ಕೆಲವು ದಿನಗಳಿಂದ ಎಣ್ಮಕಜೆ, ದೇಲಂಪಾಡಿ ಗ್ರಾ.ಪಂ. ವ್ಯಾಪ್ತಿಗಳ ಗಡಿ ಗ್ರಾಮಗಳನ್ನು ಸಂದರ್ಶಿಸಿ ಸ್ಥಳೀಯರಂದ ಮಾಹಿತಿ ಕಲೆಹಾಕಿದ್ದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನಿಯೋಗವೂ ಅವರೊಂದಿಗಿದ್ದು ಚರ್ಚಿಸಿತ್ತು. ಈ ಸಂದರ್ಭ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿ ರಸ್ತೆಗಳಲ್ಲಿರುವ ಮಣ್ಣನ್ನು ತೆಗೆಯಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ತಲಪಾಡಿಯಲ್ಲೂ ಪ್ರತಿಭಟನೆ ನಡೆಸಿದ್ದರು.
ಎರಡೂ ಜಿಲ್ಲೆಗಳ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಬೇಕೆಂದು ಜಿಲ್ಲಾ ಬಿಜೆಪಿ ಅಹರ್ನಿಶಿ ಪ್ರತಿಭಟನೆಯ ಫಲವಾಗಿ ಇದೀಗ ಗಡಿನಾಡಿನ ಜನತೆಗೆ ಬೇಡಿಕೆಯೊಂದು ಸಾಕಾರಗೊಂಡು ನಿಟ್ಟುಸಿರು ಬಿಡುವಂತಾಗಿದೆ.


