ಪಾಲಕ್ಕಾಡ್: ಕೋವಿಡ್ ನಿಯಂತ್ರಣಗಳನ್ನು ಸಡಿಲಿಸಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ರೈಲು ಸೇವೆಗಳಿಗೆ ಅವಕಾಶ ನೀಡಲಾಗುವುದು. ಕೇರಳದಲ್ಲಿ ಮಾವೇಲಿ ಎಕ್ಸ್‍ಪ್ರೆಸ್, ಮಲಬಾರ್ ಎಕ್ಸ್‍ಪ್ರೆಸ್ ಮತ್ತು ಅಮೃತ ಎಕ್ಸ್‍ಪ್ರೆಸ್ ಕಾರ್ಯನಿರ್ವಹಿಸಲಿವೆ ಎಂದು ಮಾಧ್ಯಮಗಳು ವರದಿ ಮಾಡಿದೆ. ನಿಯಮಿತ ಸೇವೆಗಿಂತ ಭಿನ್ನವಾಗಿ ಹೊಸ ವೇಳಾಪಟ್ಟಿಗನುಗುಣವಾಗಿ ಇವುಗಳು ಸಂಚಾರ ನಡೆಸಲಿವೆ.
ಈ ಹಿಂದಿನಂತೆ ಸಾಮಾನ್ಯ ಪ್ರಯಾಣಕ್ಕೆ ತಾತ್ಕಾಲಿಕವಾಗಿ ಅನುಮತಿ ಇರಲಾರದು. ಆದರೂ ವಿಶೇಷ ಸೇವೆಗಳಿಗೆ ಇದೀಗ ಚಿಂತನೆ ನಡೆಸಲಾಗಿದೆ. ಮಾವೇಲಿ ಮತ್ತು ಮಲಬಾರ್ ಎಕ್ಸ್‍ಪ್ರೆಸ್ ಮಂಗಳೂರಿನಿಂದ ತಿರುವನಂತಪುರಕ್ಕೆ ಕಾಸರಗೋಡು ಮೂಲಕ ಚಲಿಸಲಿದೆ. ಮಧುರೈನಿಂದ ಅಮೃತ ಎಕ್ಸ್‍ಪ್ರೆಸ್ ತಿರುವನಂತಪುರಂನಿಂದ ಪಾಲಕ್ಕಾಡ್ ವರೆಗೆ ಚಲಿಸಲಿದೆ.
ರೈಲುಗಳ ವಿಶೇಷ ಸೇವೆ ಜೂನ್ 15 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಹಂತದಲ್ಲಿ ಪೂರ್ವ ನಿಗದಿತ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಸಂಚಾರ ಅನುಮತಿ ಇರಲಿದೆ. ಶನಿವಾರ ಬುಕಿಂಗ್ ಪ್ರಾರಂಭವಾಗಲಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನಿರೀಕ್ಷಿಸಲಾಗಿದೆ.
ಪ್ರಸ್ತುತ ಕೇರಳದಲ್ಲಿ ವಿಶೇಷ ರೈಲುಗಳು ಮಾತ್ರ ಓಡುತ್ತಿವೆ. ರಾಜ್ಯದಲ್ಲಿ ಪ್ರಸ್ತುತ ಎರಡು ಜನ ಶತಾಬ್ದಿ ಎಕ್ಸ್‍ಪ್ರೆಸ್ ಮತ್ತು ವೆನಾಡ್ ಎಕ್ಸ್‍ಪ್ರೆಸ್ ಸೇವೆಗಳಿವೆ. ವೆನಾಡ್ ಎಕ್ಸ್‍ಪ್ರೆಸ್ ಪ್ರಸ್ತುತ ತಿರುವನಂತಪುರಂನಿಂದ ಎರ್ನಾಕುಲಂ ವರೆಗೆ ಮಾತ್ರ ಚಾಲನೆಯಲ್ಲಿದೆ.


