ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಆಗಬೇಕಾದ ತುರ್ತು ಅಗತ್ಯಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕರೆದಿದ್ದ ಸಮಾಲೋಚನಾ ಸಭೆಯನ್ನು ಯುಡಿಎಫ್ ಬಹಿಷ್ಕರಿಸಿದ್ದು, ಜಿಲ್ಲಾಧಿಕಾರಿಗಳ ಏಕಪಕ್ಷೀಯ ಚಿಂತನೆಗಳನ್ನು ನಾವು ಬೆಂಬಲಿಸಲಾರೆವು ಎಂದು ಯುಡಿಎಫ್ ಖಾರವಾಗಿ ಪ್ರತಿಕ್ರೀಯಿಸಿದೆ.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ. ಖಮರುದ್ದೀನ್, ಎನ್.ಎ. ನೆಲ್ಲಿಕ್ಕುನ್ನು, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರ ಯುಡಿಎಫ್ ವಿಭಾಗ ಸಂಘದ ಜಿಲ್ಲಾಧ್ಯಕ್ಷ ಎ.ಎ.ಜಲೀಲ್ ಸಭೆಯನ್ನು ಬಹಿಷ್ಕರಿಸಿದರು.
ಜಿಲ್ಲಾಧಿಕಾರಿಗಳು ಕೇವಲ ರಾಜಕೀಯ ವ್ಯಕ್ತಿಯಂತೆ ವರ್ತಿಸುತ್ತಿರುವರು. ಅವರ ಈ ಮನೋಸ್ಥಿತಿ ನಿಯಂತ್ರಿಸದ ಹೊರತು ನಾವು ಸಭೆಯಲ್ಲಿ ಭಾಗವಹಿಸಲಾರೆವು ಎಂದು ರಾಜ್ ಮೋಹನ್ ಉಣ್ಣಿತ್ತಾನ್ ಮತ್ತು ಎಂ.ಸಿ.ಕಮರುದ್ದೀನ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಂದಾಯ ಸಚಿವ ಇ ಚಂದ್ರಶೇಖರನ್ ಅವರು ಸಭೆಯಲ್ಲಿ ಪಾಲ್ಗೊಳ್ಳುವರೆಂದು ಭಾವಿಸಿದ್ದೆವು. ಆದರೆ, ಸಚಿವರ ಅನುಪಸ್ಥಿತಿಯಲ್ಲಿ ಸಭೆ ನಡೆಸುವುದು, ಚರ್ಚಿಸುವುದರಲ್ಲಿ ಅರ್ಥವಿಲ್ಲ ಎಂದು ಸಂಸದ ರಾಜಮೋಹನ ಉಣ್ಣಿತ್ತಾನ್ ಹೇಳಿದರು. ಸರ್ಕಾರದ ಕೋವಿಡ್ ವಿರೋಧಿ ಪ್ರಯತ್ನಗಳಿಗೆ ಯುಡಿಎಫ್ ಸಂಪೂರ್ಣ ಸಹಕಾರ ನೀಡುತ್ತಿದೆ. ಆದರೆ ಜಿಲ್ಲಾಧಿಕಾರಿಗಳು ಯುಡಿಎಫ್ ನ ನಿರ್ದೇಶನಗಳನ್ನು ಅಲಕ್ಷ್ಯಿಸುತ್ತಿದ್ದಾರೆ. ಜೊತೆಗೆ ತುರ್ತು ಅಗತ್ಯಗಳಿಗೆ ಕರೆ ಮಾಡಿದರೆ ಜಿಲ್ಲಾಧಿಕಾರಿಗಳು ಸಂಪರ್ಕಕ್ಕೆ ಲಭ್ಯರಾಗುತ್ತಿಲ್ಲ ಎಂದು ಯುಡಿಎಫ್ ಪ್ರತಿನಿಧಿಗಳು ಆರೋಪಿಸಿದರು.
ಜಿಲ್ಲಾಧಿಕಾರಿಗಳು ತಮ್ಮ ಏಕಪಕ್ಷೀಯ ನಿರ್ಧಾರಗಳಿಂದ ಹಿಂದೆ ಸರಿದರೆ ಸಹಕರಿಸುವುದಾಗಿ ಉಣ್ಣಿತ್ತಾನ್ ಮತ್ತು ಕಮರುದ್ದೀನ್ ಹೇಳಿದರು. ಇತರ ರಾಜ್ಯಗಳಿಂದ ನಮ್ಮ ಜಿಲ್ಲೆಯವರೇ ಆದ ಜನರು ಆಗಮಿಸಲು ಜಿಲ್ಲಾಧಿಕಾರಿಗಳು ಪಾಸ್ ಒದಗಿಸುವುದಿಲ್ಲ. ಸ್ವಂತ ಊರಿಗೆ ಬರುವ ಜನರ ಹಕ್ಕನ್ನು ಅದು ಮೊಟಕುಗೊಳಿಸುತ್ತದೆ. ಕಾಸರಗೋಡು ಜಿಲ್ಲೆಯು ಜಿಲ್ಲಾಧಿಕಾರಿಯು ಪಡೆದ ವರದಕ್ಷಿಣೆ ಅಲ್ಲ ಎಂಬುದನ್ನು ಜಿಲ್ಲಾಧಿಕಾರಿ ನೆನಪಿನಲ್ಲಿಡಬೇಕು ಎಂದು ಉಣ್ಣಿತ್ತಾನ್ ಹೇಳಿದರು. ಎಲ್‍ಡಿಎಫ್‍ಗಾಗಿ ಜಿಲ್ಲಾಧಿಕಾರಿಗಳು ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಇನ್ನಾದರೂ ಕೊನೆಗೊಳಿಸಬೇಕು ಎಂದು ಸಂಸದ ಉಣ್ಣಿತ್ತಾನ್ ಒತ್ತಾಯಿಸಿದರು.
ಲಾಕ್‍ಡೌನ್‍ನಲ್ಲಿ ಹೆಚ್ಚಿನ ರಿಯಾಯಿತಿಗಳು ಮತ್ತು ದೇಶ-ವಿದೇಶಗಳಿಂದ ಜನರು ಜಿಲ್ಲೆಗೆ ಆಗಮಿಸುವ ವೇಳೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲು ಪ್ರತಿನಿಧಿಗಳ ಸಭೆ ನಡೆದಿತ್ತು.
ಶಾಸಕರಾದ ಕೆ. ಕುಞÂ್ಞ ರಾಮನ್, ಎಂ ರಾಜಗೋಪಾಲನ್, ಜಿಲ್ಲಾಧಿಕಾರಿ ಡಾ ಡಿ ಸಜಿತ್ ಬಾಬು ಮತ್ತು ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಡಿ. ಶಿಲ್ಪಾ, ನೀಲೇಶ್ವರಂ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಪಿ.ಜಯರಾಜನ್ ಮತ್ತು ಡಿಎಂಒ ಡಾ.ವಿ.ವಿ.ರಾಮದಾಸ್ ಉಪಸ್ಥಿತರಿದ್ದರು.


