ಕೊಚ್ಚಿ: ಆರೆಸ್ಸೆಸ್‍ನ ಹಿರಿಯ ಪ್ರಚಾರಕ ಆರ್. ವೇಣುಗೋಪಾಲ್(96) ಅವರು ಕೊಚ್ಚಿಯ 'ಮಾಧವ ನಿವಾಸ'ದಲ್ಲಿ ನಿಧನರಾದರು. ಬಿಎಂಎಸ್‍ನ ಮಾಜಿ ಅಖಿಲಭಾರತ ಕಾರ್ಯಾಧ್ಯಕ್ಷರಾಗಿದ್ದ ಇವರು ಕೇಸರಿ ಪತ್ರಿಕೆ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಪಾಲಕ್ಕಾಡಿನ ವಿಕ್ಟೋರಿಯಾ ಕಾಲೇಜು, ಬನಾರಸ್ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿದ್ದರು. ವಿದ್ಯಾರ್ಥಿ ಜೀವನದಲ್ಲೇ ದತ್ತೋಪಂತ್ ಠೇಂಗಡಿ ಅವರೊಂದಿಗಿನ ನಿಕಟ ಸಂಪರ್ಕ ಇವರನ್ನು ಆರೆಸ್ಸೆಸ್‍ನ ಸಕ್ರಿಯ ಕಾರ್ಯಕರ್ತನನ್ನಾಗಿಸಿತ್ತು. 1946ರಲ್ಲಿ ಆರೆಸ್ಸೆಸ್ ಸೇರ್ಪಡೆಗೊಂಡ ಇವರು 1965ರಲ್ಲಿ ಭಾರತೀಯ ಜನಸಂಘದ ಜವಾಬ್ದಾರಿ ವಹಿಸಿಕೊಂಡಿದ್ದರು. 1967ರಲ್ಲಿ ಭಾರತೀಯ ಮಜ್ದೂರ್ ಸಂಘ(ಬಿ.ಎಂ.ಎಸ್)ದ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಿಎಂಎಸ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ, ನಂತರ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.


