ಕಾಸರಗೋಡು: ಜಲಸಂರಕ್ಷಣೆಯಲ್ಲಿ ನೂತನ ಮಾದರಿ ಮೂಲಕ ಕಾಸರಗೋಡು ಜಿಲ್ಲೆ ಗಮನ ಸೆಳೆಯುತ್ತಿದೆ. ಜಲಾಶಯಗಳಿಗೆ (ಬಾವಿಯಲ್ಲಿ ಬಳಸುವ) ರಿಂಗ್ ತಡೆಗೋಡೆಗಳನ್ನು ನಿರ್ಮಿಸುವ (ಅರ್ಧ ಸ್ಥಿರ ತಡೆಗೋಡೆ) ಮೂಲಕ ಜಲಸಂರಕ್ಷಣೆ ನಡೆಸುವ ಯೋಜನೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಜಿಲ್ಲೆಯಲ್ಲಿ ಭೂಗರ್ಭಜಲ ಗಣನೀಯವಾಗಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರತರ ನೀರಿನ ಬರ ತಲೆದೋರುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಜಲಸಂರಕ್ಷಣೆ ಚಟುವಟಿಕೆಗಳು ವ್ಯಾಪಕವಾಗಿ ನಡೆದುಬರುತ್ತಿವೆ. ಇದರ ಅಂಗವಾಗಿ ಅತ್ಯಂತ ಕಡಿಮೆ ವೆಚ್ಚದ, ಅತ್ಯಂತ ಪರಿಣಾಮಕಾರಿಯಾಗಿರುವ ಜಲಾಶಯಗಳಿಗೆ ರಿಂಗ್ ತಡೆಗೋಡೆ ನಿರ್ಮಿಸುವ ಯೋಜನೆ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಇದರ ಅಂಗವಾಗಿ ಜಿಲ್ಲೆಯ 12 ನದಿಗಳಿಗೆ ಹರಿಯುವ ಸುಮಾರು 650 ಜಲಾಶಯಗಳಲ್ಲಿ ಸುಮಾರು 900 ರಿಂಗ್ ತಡೆಗೋಡೆ ನಿರ್ಮಿಸಲಾಗುವುದು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ನೌಕರಿ ಖಾತರಿ ಯೋಜನೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಗಳ ಜಂಟಿ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಲಾಗುವುದು. ತಡೆಗೋಡೆ ನಿರ್ಮಿಸುವ ಜಾಗ ಪತ್ತೆ ನಡೆಸುವ ಹೊಣೆ ಜನಪ್ರತಿನಿಧಿಗಳಿಗಿರುವುದು. ಪ್ರತಿ ಗ್ರಾಮಪಂಚಾಯತ್ ನಲ್ಲಿ ಕನಿಷ್ಠ 20 ರಿಂಗ್ ತಡೆಗೋಡೆ 45 ದಿನಗಳ ಅವಧಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಬಡತನನಿವಾರಣೆ ವಿಭಾಗ ಜಿಲ್ಲಾ ಯೋಜನೆ ನಿರ್ದೇಶಕ ಕೆ.ಪ್ರದೀಪನ್ ತಿಳಿಸಿದರು.
2019 ಡಿ.29ರಿಂದ ಒಂದು ವಾರ ನಡೆದಿದ್ದ "ತಡೆಗೋಡೆ ಉತ್ಸವ" ಜಿಲ್ಲೆಯಾದ್ಯಂತ 2800 ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಈ ಮೂಲಕ ಈ ಪ್ರದೇಶಗಳ ಜಲಾಶಯಗಳಲ್ಲಿ ಜಲದ ಮಟ್ಟ ಹೆಚ್ಚಿದೆ. ಜನಪರ ಚಟುವಟಿಕೆಗಳ ಮೂಲಕ ಜಲಸಂರಕ್ಷಣೆ ಈ ಮೂಲಕ ಸಾಧ್ಯವಾಗಿದೆ ಎಂದು ಕೆ.ಡಿ.ಪಿ. ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.
ಕಿನಾನೂರು-ಕರಿಂದಳಂ ಪಂಚಾಯತ್ ಮತ್ತು ಕಯ್ಯೂರು-ಚೀಮೇನಿ ಪಂಚಾಯತ್ ಗಳಲ್ಲಿ ಈ ಯೋಜನೆಯ ಮೊದಲ ಹಂತದಲ್ಲಿ ತಲಾ ಒಂದು ರಿಂಗ್ ತಡೆಗೋಡೆ ನಿರ್ಮಿಸಲಾಗಿದ್ದು, ಪರಿಣಾಮಕಾರಿಯಾಗಿದೆ.


