ಕಾಸರಗೋಡು: ರಾಜ್ಯದಲ್ಲಿ ಎ.ಪಿ.ಎಲ್., ಬಿ.ಪಿ.ಎಲ್. ವ್ಯತ್ಯಾಸವಿಲ್ಲದೆ ವಯೋಮಿತ್ರ ಯೋಜನೆಯಲ್ಲಿ ಸೇವೆಗಳು ಉಚಿತವಾಗಿರುವುದು ಸಾರ್ವಜನಿಕ ವಲಯದಲ್ಲಿ ಜನಪರತೆಗೆ ನಿದರ್ಶನವಾಗಿ ಮನ್ನಣೆಗೆ ಕಾರಣವಾಗಿದೆ.
ವಯೋವೃದ್ಧರ ಆರೋಗ್ಯ ಸಂರಕ್ಷಣೆಗೆ ಆದ್ಯತೆ ನೀಡಿ ರಾಜ್ಯಸರಕಾರ ಜಾರಿಗೊಳಿಸಿರುವ ಈ ಯೋಜನೆ ಜಿಲ್ಲೆಯಲ್ಲಿ ಮೂರು ನಗರಸಭೆಗಳಲ್ಲಿ ಅನುಷ್ಠಾನಗೊಂಡಿದೆ. 2011ರಲ್ಲಿ ಕಾಸರಗೋಡು ನಗರಸಭೆಯಲ್ಲಿ ಆರಂಭಿಸಲಾದ ಈ ಯೋಜನೆ ಕಾಞಂಗಾಡ್, ನೀಲೇಶ್ವರ ನಗರಸಭೆಗಳಲ್ಲೂ ಜಾರಿಗೊಂಡಿದ್ದು, ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿದೆ. ಕಾಸರಗೋಡು, ಕಾಞಂಗಾಡ್ ನಗರಸಭೆಗಳ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರ ಮಂದಿ ವಯೋವೃದ್ಧರು, ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 1800 ಮಂದಿ ವಯೋವೃದ್ಧರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಪ್ರಜೆಗಳು ಎ.ಪಿ.ಎಲ್., ಬಿ.ಪಿ.ಎಲ್. ವ್ಯತ್ಯಾಸವಿಲ್ಲದೆ ವಯೋಮಿತ್ರ ಯೋಜನೆಯ ಸೇವೆಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಸ್ಥಳೀಯಾಡಳಿತೆ ಸಂಸ್ಥೆಗಳ ನೇತೃತ್ವದಲ್ಲಿ ವಿವಿಧ ವಾರ್ಡ್ ಗಳನ್ನು ಕೇಂದ್ರೀಕರಿಸಿ ಸಿದ್ಧಪಡಿಸಿರುವ ವಯೋಮಿತ್ರ ಒ.ಪಿ.ಕ್ಲಿನಿಕ್ ಗಳಲ್ಲಿ ಜೀವನ ಶೈಲಿರೋಗಗಳ ತಪಾಸಣೆ, ಇನ್ಸುಲಿನ್ ಸಹಿತ ಅಗತ್ಯದ ಔಷಧ ಉಚಿತವಾಗಿ ವಿತರಿಸಲಾಗುತ್ತಿದೆ.
ಜೊತೆಗೆ ವಯೋವೃದ್ಧರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೌನ್ಸಿಲಿಂಗ್ ಸೇವೆಯೂ ನೀಡಲಾಗುತ್ತಿದೆ. ಹೆಚ್ಚುವರಿ ಗಮನ, ಶುಶ್ರೂಷೆ, ಅಗತ್ಯವಿರುವ ಗಂಭೀರ
ಸ್ವರೂಪದ ರೋಗಿಗಳನ್ನು ಪಾಲಿಯೇಟಿವ್ ಕೇರ್ ಸೆಂಟರ್ಗಳೀಗೆ ದಾಖಲಿಸುವುದು, ಉಚಿತ ಕಾನೂನು ಸಹಾಯ ಇತ್ಯಾದಿ ಸೇವೆಗಳು ಯೋಜನೆಯ ಅಂಗವಾಗಿ ಒದಗಿಸಲಾಗುತ್ತಿದೆ. ಸಮಾಜ ಸುರಕ್ಷಾ ಮಿಷನ್ ನ ವಿವಿಧ ಯೋಜನೆಗಳಿಗಾಗಿ ಜಿಲ್ಲಾ ಪಂಚಾಯತ್ 25 ಲಕ್ಷ ರೂ., ನಗರಸಭೆಗಳು, ಬ್ಲೋಕ್ ಪಂಚಾಯತ್ ಗಳು ತಲಾ 10ಲಕ್ಷ ರೂ., ಗ್ರಾಮ ಪಂಚಾಯತ್ ಗಳು ತಲಾ 5 ಲಕ್ಷ ರೂ. ಪ್ರತಿ ವರ್ಷ ಮೀಸಲಿರಿಸುತ್ತಿವೆ.
ಯೋಜನೆಯ ಅಂಗವಾಗಿ ವೈದ್ಯಕೀಯ ತಂಡ ಫಲಾನುಭವಿಗಳಿಗೆ ತಿಂಗಳಲ್ಲಿ ಎರಡು ಬಾರಿ ತಪಾಸಣೆ ನಡೆಸುತ್ತಾರೆ. ಅವರ ದೈಹಿಕ, ಮಾನಸಿಕ ಆರೋಗ್ಯ ಸಂರಕ್ಷಣೆಗಾಗಿ ವೈದ್ಯಕೀಯ ಶಿಬಿರಗಳು, ಸ್ನೇಹ ಸಲ್ಲಾಪ, ವಿನೋದ ಯಾತ್ರೆ ಇತ್ಯಾದಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ.


