ಕಾಸರಗೋಡು: ತೆಂಗಿನ ಮರದ ಬುಡದಲ್ಲಿ ನೀರಿಂಗಿಸುವ ಗುಂಡಿಗಳನ್ನು ತೋಡುವ ಮೂಲಕ ಕಾಸರಗೋಡು ಜಿಲ್ಲೆ ಜಗತ್ತಿಗೆ ಮಾದರಿಯಾಗುತ್ತಿದೆ. ಮಳೆ ನೀರು ಇಂಗಿಸುವ ನಿಟ್ಟಿನಲ್ಲಿ ಈ ಮೂಲಕ ಹೊಸ ಕ್ರಾಂತಿ ನಡೆಸಲು ಜಿಲ್ಲೆ ಸಿದ್ಧವಾಗಿದೆ.
ಜಿಲ್ಲೆಯಲ್ಲಿ ವರ್ಷದಲ್ಲಿ 3 ಸಾವಿರ ಮಿ.ಮೀ. ಮಳೆ ಲಭಿಸುತ್ತಿದೆ. ಆದರೆ ಕಡಿಮೆ ದಿನಗಳಲ್ಲಿ ಮಾತ್ರ ಬಿರುಸಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿಡುವುದು ಜಿಲ್ಲೆಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತೆಂಗಿನ ಮರಗಳ ಬುಡದಲ್ಲಿ ನೀರಿಂಗಿಸುವ ಗುಂಡಿ ತೋಡುವ ಮೂಲಕ ಮಳೆ ನೀರು ಸಂಗ್ರಹ ನಡೆಸಲಾಗುವುದು.
ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಜಾಗದಲ್ಲಿ ಒಂದು ಕೋಟಿಗೂ ಮೀರಿ ತೆಂಗಿನ ಕೃಷಿಯಿದೆ. ಪ್ರತಿ ಮಳೆಗಾಲದಲ್ಲೂ ತೆಂಗಿನ ಮರಗಳ ಬುಡದಲ್ಲಿ ಇಂಗು ಗುಂಡಿ ತೋಡಿ ಮಳೆನೀರು ಮಣ್ಣಿಗಿಳಿಯುವಂತೆ ಮಾಡಲಾಗುವುದು. ಈ ಮೂಲಕ ವರ್ಷಕ್ಕೆ ಕನಿಷ್ಠ ಒಂದೂಕಾಲು ಲಕ್ಷ ಲೀ. ನೀರು ಭೂಮಿಗಿಳಿಯಲಿದೆ. ತೆಂಗಿನ ಬುಡದಲ್ಲಿ ಒಂದೂವರೆ ಮೀಟರ್ ದೂರದಲ್ಲಿ ಈ ಗುಂಡಿಗಳನ್ನು ತೋಡಲಾಗುವುದು. ಜೊತೆಗೆ ಪ್ರತಿ ತೆಂಗಿನ ಮರದ ಬುಡಕ್ಕೆ ಕನಿಷ್ಠ 25 ಕಿಲೋ ಜೈವಿಕ ಗೊಬ್ಬರ ಹಾಕಲಾಗುವುದು. ಸೆಗಣಿ ಗೊಬ್ಬರ ಮತ್ತು ಹಸುರೆಲೆ ಗೊಬ್ಬರಕ್ಕೆ ಈ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು. ತೆಂಗಿನ ತೋಟಗಳಲ್ಲಿ ಎರಡು ಮರಗಳ ನಡುವೆ ಅರ್ಧ ಮೀ. ಅಗಲ ಮತ್ತು ಉದ್ದದ ಗುಂಡಿಗಳನ್ನು ತೋಡಿ ಅದರಲ್ಲಿ ತೆಂಗಿನ ನಾರನ್ನು ತುಂಬಬೇಕು. ನಂತರ 2 ಇಂಚು ಮಣ್ಣು ಹಾಕಿ ಮುಚ್ಚಬೇಕು. ತೆಂಗಿನ ನಾರಿಗೆ ತನ್ನ ಭಾರಕ್ಕಿಂತ 8 ಪಟ್ಟು ನೀರು ಹೀರಿ ಸಂಗ್ರಹಿಸಿಡುವ ಸಾಮಥ್ರ್ಯವಿದೆ. ಹೀಗಾಗಿ ಈ ತಂತ್ರ ಇಲ್ಲಿ ಬಳಸಲಾಗುವುದು.
ಜೂ.29ರಂದು ಯೋಜನೆಗೆ ಚಾಲನೆ :
ಜಿಲ್ಲೆಯಲ್ಲಿರುವ ಎಲ್ಲ ತೆಂಗಿನ ಮರಗಳ ಬುಡದಲ್ಲೂ ಈ ಗುಂಡಿಗಳನ್ನು ತೋಡಲಾಗುವುದು. ಈ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಜೂ.29ರಂದು ಬೆಳಗ್ಗೆ ವಿದ್ಯಾನಗರದ ಜಿಲ್ಲಾಧಿಕಾರಿ ಅವರ ಕ್ಯಾಂಪ್ ಹೌಸ್ ಆವರಣದ ತೆಂಗಿನ ಮರದ ಬುಡದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಗುಂಡಿ ತೋಡುವ ಮೂಲಕ ಈ ಯೋಜನೆಗೆ ಚಾಲನೆ ನೀಡುವರು.
ಸಾಂಕ್ರಾಮಿಕ ಸವಾಲು:
ಈ ಮಧ್ಯೆ ತೆಂಗಿನ ಬುಡದಲ್ಲಿ ನೀರಿಂಗಿಸಲು ಗುಂಡಿಗಳನ್ನು ತೆಗೆಯಲು ಯೋಜನೆ ಜಾರಿಗೊಳ್ಳುತ್ತಿರುವಂತೆ ಸಾಂಕ್ರಾಮಿಕ ರೋಗ ಭೀತಿ ಕಾಡುವ ಸಾಧ್ಯತೆಗಳ ಬಗ್ಗೆ ಗೊಂದಲಗಳೂ ಮೂಡಿಬಂದಿದೆ. ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಡೆಂಗ್ಯು, ಮಲೇರಿಯಾ ಸಹಿತದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಕಟಿಬದ್ದರಾಗಿ ರೋಗ ಕಾರಕವಾಗಿರುವ ವೈರಸ್ ಗಳು ಉತ್ಪತ್ತಿಯಾಗುವ ಮೂಲಗಳನ್ನು ಸಂಪೂರ್ಣ ನಿಯಂತ್ರಿಸಲು ಉಜ್ಜುಗರಾಗುವ ಮಧ್ಯೆ ಹೊಸ ನೀರಿಂಗಿಸುವ ಪರಿಕಲ್ಪನೆ ವ್ಯಾಪಕ ಗೊಂದಲಗಳಿಗೂ ಕಾರಣವಾಗಲಿದೆ.



