ಕಾಸರಗೋಡು:: ಕಂದಾಯ ಸಚಿವ ಇ ಚಂದ್ರಶೇಖರನ್ ಅವರ ಸ್ವ-ಕ್ಷೇತ್ರದಲ್ಲೇ ಮೂರು ಸ್ಮಾರ್ಟ್ ಗ್ರಾಮ ಕಚೇರಿಗಳ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಆರು ತಿಂಗಳ ಹಿಂದೆ ಪ್ರಾರಂಭವಾದ ಪರಪ್ಪ, ಮಾಲೋಮ್ ಮತ್ತು ವೆಸ್ಟ್ ಎಳೇರಿ ಗ್ರಾಮ ಕಚೇರಿಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಈಗಿರುವ ಗ್ರಾಮ ಕಚೇರಿ ಕಟ್ಟಡವನ್ನು ನೆಲಸಮ ಮಾಡಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಗ್ರಾಮ ಕಚೇರಿಯನ್ನು ಅದೇ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿಯಾಗಿತ್ತು. 50 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾ ನಿರ್ಮಿತಿ ಕೇಂದ್ರದೊಂದಿಗೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
1,200 ಚದರ ಅಡಿ ವಿಸ್ತೀರ್ಣದಲ್ಲಿ ಸ್ಮಾರ್ಟ್ ವಿಲೇಜ್ ಕಚೇರಿ ಕಟ್ಟಡವನ್ನು ನಿರ್ಮಿಸಲಾಗುವುದೆಂದು ತಿಳಿಸಲಾಗಿತ್ತು. ವೆಸ್ಟ್ ಎಳೇರಿ ಗ್ರಾಮ ಕಚೇರಿಯನ್ನು ಕಂದಾಯ ಸಚಿವರ ಸ್ವ ಆಸಕ್ತಿಯಂತೆ ಸ್ಮಾರ್ಟ್ ವಿಲೇಜ್ ಕಚೇರಿ ನಿರ್ಮಾಣ ಪಟ್ಟಿಗೆ ಸೇರ್ಪಡೆಗೊಂಡಿರುವುದಾಗಿದೆ. ಆದರೆ, ಮೊದಲ ಹಂತದಲ್ಲಿ ಹಳೆಯ ಗ್ರಾಮ ಕಚೇರಿಯ ಹಂಚುಗಳನ್ನು ತೆಗೆಯುವುದು, ಕಿಟಕಿಗಳನ್ನು ಕಿತ್ತು ತೆಗೆದಿರುವುದು ಹೊರತು ಬಳಿಕ ಬೇರೆ ಯಾವುದೇ ನಿರ್ಮಾಣ ಕಾರ್ಯಗಳು ನಡೆದಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಈ ಮಧ್ಯೆ ನಿರ್ಮಿತಿ ಕೇಂದ್ರ ನೇಮಕ ಮಾಡಿದ ಅಭಿಯಂತರ ಆರು ತಿಂಗಳ ವೇತನವನ್ನು ಪಡೆದು ಆರು ತಿಂಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಹಠಾತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಳಿಕದ ಕಾಮಗಾರಿ ನಡೆಯದೆ ಬಾಕಿ ಉಳಿದಿದೆ ಎಂದು ತಿಳಿಯಲಾಗಿದ್ದು ಕೋವಿಡ್ ಹಿನ್ನೆಲೆಯ ಲಾಕ್ ಡೌನ್ ಕೂಡಾ ಕಾರಣ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲು ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ನೀಡಲಾಗಿತ್ತು. ಪ್ರಸ್ತುತ ವೆಸ್ಟ್ ಎಳೇರಿ ಗ್ರಾಮ ಕಚೇರಿಯು ಖಾಸಗೀ ವ್ಯಕ್ತಿಯೊಬ್ಬರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಚಿವರ ಸ್ವ ಕ್ಷೇತ್ರದಲ್ಲೇ ಗ್ರಾಮ ಕಚೇರಿ ನಿರ್ಮಾಣ ವಿಳಂಬವಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.


