ಮಂಜೇಶ್ವರ: ಯುಡಿಎಫ್ ಪಕ್ಷದಲ್ಲಿ ಆಂತರಿಕ ಅಸಂತುಷ್ಠಿ ಹೊಗೆಯಾಡುತ್ತಿದ್ದುದು ಇದೀಗ ಹತ್ತಿ ಉರಿಯತೊಡಗಿದ್ದು 15ಕ್ಕಿಂತಲೂ ಮಿಕ್ಕಿದ ಯುಡಿಎಫ್ ಕಾರ್ಯಕರ್ತರು ಅಧಿಕೃತವಾಗಿ ಎಡರಂಗಕ್ಕೆ ಸೇರ್ಪಡೆಗೊಂಡಿರುವುದರೊಂದಿಗೆ ಯುಡಿಎಫ್ ತೀವ್ರ ಮುಖಭಂಗಕ್ಕೊಳಗಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಕಾಸರಗೋಡಿನ ಸಂಸದನಾಗುವಲ್ಲಿ ಬಹುಮತದಿಂದ ಗೆಲ್ಲಿಸಿರುವುದು ಮುಸ್ಲಿಂ ಲೀಗ್ ಕಾರ್ಯಕರ್ತರಾಗಿದ್ದಾರೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಇದರಿಂದ ಅಸಮಾಧಾನಗೊಂಡ ಮಂಜೇಶ್ವರ ಮಂಡಲದ ಹಲವು ಕಾರ್ಯಕರ್ತರು ಪಕ್ಷದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಇದೀಗ ಎಲ್‍ಡಿಎಫ್ ಗೆ ಪಕ್ಷಾಂತರಗೊಂಡು ತಮ್ಮ ಅಸಮಧಾನದ ಹೊಡೆದವನ್ನು ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯ ಬಳಿಕ ಯುಡಿಎಫ್ ನೇತಾರರ ಅಸಮರ್ಪಕ ನಿರ್ಧಾರಗಳಿಂದ ರೋಸಿರುವ ಯುಡಿಎಫ್ ಕಾರ್ಯಕರ್ತರು ಕಳೆದ ಒಂದು ವರ್ಷಗಳಿಂದ ಭಿನ್ನಮತ ವ್ಯಕ್ತಪಡಿಸಿದ್ದರು.
ಮುಂಬರಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಬೆನ್ನಿಗೇ ನಡೆದಿರುವ ಬೆಳವಣಿಗೆ ಯುಡಿಎಫ್ ಗೆ ಭಾರೀ ಹೊಡೆತ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸಂಸದ ರಾಜಮೋಹನ ಉಣ್ಣಿತ್ತಾನ್ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒಂದು ವಿಭಾಗದ ಯುಡಿಎಫ್ ಸದಸ್ಯರು ಒತ್ತಾಯಿಸುತ್ತಿದ್ದರೂ ಪಕ್ಷಗಳ ಪ್ರಮುಖ ನೇತಾರರು ನಿರ್ಲಕ್ಷ್ಯ ಧೋರಣೆ ತಳೆದಿರುವುದರಿಂದ ಮನನೊಂದು ಪಕ್ಷಾಂತರಗೈಯ್ಯುತ್ತಿರುವುದಾಗಿ ಸಿಪಿಎಂ ಪಕ್ಷ ಸೇರ್ಪಡೆಗೊಂಡ ಕೆಎಸ್‍ಯು(ಕೇರಳ ಸ್ಟೂಡೆಂಟ್ ಯೂನಿಯನ್)ಸಹಿತರಾದ 15ಕ್ಕಿಂತಲೂ ಮಿಕ್ಕಿದ ಯವ ಕಾರ್ಯಕರ್ತರು ತಿಳಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಯುಡಿಎಫ್ ಎರಡು ತಂಡಗಳಾಗಿ ವಿಭಜಿಸಲ್ಪಟ್ಟಿದ್ದು ಯುಡಿಎಫ್ ನಾಯಕರು ಮತ್ತು ಕಾರ್ಯಕರ್ತರ ಎರಡು ತಂಡಗಳಾಗಿ ರೂಪುಪಡೆದಿದೆ.
ಸಿಪಿಎಂಗೆ ಸೇರಿದ ಯುಡಿಎಫ್ ಕಾರ್ಯಕರ್ತರನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸದಸ್ಯ ಕೆ.ಆರ್.ಜಯಾನಂದ, ಕುಂಬಳೆ ವಿಭಾಗ ಸಮಿತಿ ಕಾರ್ಯದರ್ಶಿ ಸುಬೈರ್ ಮತ್ತು ಪ್ರಶಾಂತ್ ನೇತೃತ್ವದಲ್ಲಿ ಪಕ್ಷದ ಕೆಂಪು ಧ್ವಜದೊಂದಿಗೆ ಸ್ವಾಗತಿಸಲಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಯುಡಿಎಫ್ ಕಾರ್ಯಕರ್ತರು ಸಿಪಿಎಂಗೆ ಸೇರಲಿದ್ದಾರೆ ಎಂದು ಕೆ.ಆರ್.ಜಯಾನಂದ ತಿಳಿಸಿದ್ದಾರೆ.


