ತಿರುವನಂತಪುರ:: ಭಾರೀ ಚರ್ಚೆಗೆ ಕಾರಣವಾಗಿದ್ದ ಶಬರಿಮಲೆ ಮಿಥುನ ಮಾಸ ಉತ್ಸವವನ್ನು ಪ್ರಬಲ ಟೀಕೆಗಳ ಬಳಿಕ ಗುರುವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಕಾವೇರಿದ ಚರ್ಚೆಯ ಬಳಿಕ ನಿರ್ಧಾರದಿಂದ ದೈವಸ್ವಂ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.
ಶಬರಿಮಲೆಯ ಮಿಥುನ ಮಾಸ್ ಹಬ್ಬವನ್ನು ಕೊರೊನಾ ಕಾರಣ ಕೈಬಿಡಲಾಗಿದೆ ಎಂದು ದೇವಸ್ವಂ ಸಚಿವ ಕಡನಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಉತ್ಸವವನ್ನು ಸಾಂಕೇತಿಕವಾಗಿ ನಡೆಸಲು ನಿರ್ಧರಿಸಲಾಗಿದೆ. ಮಿಥುನಮಾಸದ ಪೂಜೆಗೆ ಭಕ್ತರಿಗೆ ಅವಕಾಶವಿರುವುದಿಲ್ಲ. ಕೋವಿಡ್ ಭೀತಿಯ ಕಾರಣ ಶಬರಿಮಲೆಗೆ ಒಂದಷ್ಟು ಕಾಲಗಳ ವರೆಗೆ ಭಕ್ತರ ಪ್ರವೇಶಕ್ಕೆ ತಡೆ ನೀಡಬೇಕೆಂದು ಶ್ರೀಕ್ಷೇತ್ರದ ತಂತ್ರಿವರ್ಯ ಕಂಠಾರರ್ ಮಹೇಶ್ ಮೋಹನರ್ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವರು ಗುರುವಾರ ನಡೆದ ವಿಶೇಷ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿರುವರು.
ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು, ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಮತ್ತು ದೇವಸ್ವಂ ಸಚಿವ ಕಡನಂಪಳ್ಳಿ ಸುರೇಂದ್ರನ್ ಅವರೊಂದಿಗೆ ಗುರುವಾರ ನಡೆದ ವಿಸ್ಕøತ ಚರ್ಚೆಯ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಬರಿಮಲೆ ಸನ್ನಿದಿಯನ್ನು ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಡುವ ಬಗ್ಗೆ ಧಾರ್ಮಿಕ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಯಿತು. ಎಲ್ಲರೂ ತಂತ್ರಿಗಳ ನಿರ್ಧಾರದ ಪರವಾಗಿದ್ದರು. ಭಕ್ತರ ಅಪರಿಮಿತ ಪ್ರವೇಶವು ತೀವ್ರ ರೋಗ ಹರಡುವಿಕೆಗೆ ಕಾರಣವಾಗಬಹುದು ಎಂದು ಕೆಲವರು ಗಮನಸೆಳೆದಿದ್ದಾರೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಿಥುನ ಮಾಸದ ಉತ್ಸವ ಸಾಂಪ್ರದಾಯಿಕವಾಗಿ ಮಿತಿಗೊಳಪಟ್ಟ ಅಗತ್ಯದ ಜನರ ಉಪಸ್ಥಿತಿಯಲ್ಲಿ ನಡೆಯಲಿದೆ. ಎಲ್ಲಾ ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಮತ್ತು ತಂತ್ರಿವರ್ಯರು ಸುದ್ದಿಗಾರರಿಗೆ ತಿಳಿಸಿದರು. ದೇವಸ್ವಂ ಮಂಡಳಿ ಮತ್ತು ತಂತ್ರಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇವಸ್ವಂ ಮಂಡಳಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳು ತಮಗೂ ಇಲ್ಲ ಎಂದು ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಹೇಳಿದ್ದಾರೆ.
ಮೇ ತಿಂಗಳಂತೆ ರಾಜ್ಯದ ಸ್ಥಿತಿ ಈಗಿಲ್ಲ. ರಾಜ್ಯದಲ್ಲಿ ಈಗ ಕೋವಿಡ್ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಶಬರಿಮಲೆ ವ್ರತಧಾರಿಗಳಾಗಿ ಆಗಮಿಸುವ ಭಕ್ತರಲ್ಲಿ ಯಾರೊಬ್ಬನಿಗಾದರೂ ಕೋವಿಡ್ ಸೋಂಕು ದೃಢಪಟ್ಟಿದ್ದರೆ ದೇವಾಲಯದಲ್ಲಿರುವ ಪ್ರತಿಯೊಬ್ಬರೂ ಕ್ವಾರಂಟೈನ್ ಗೊಳಪಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಈ ಹಿನ್ನೆಲೆಯಲ್ಲಿ ಮಿಥುನ ಮಾಸ ಉತ್ಸವವನ್ನು ಸಾಂಪ್ರದಾಯಿಕವಾಗಿ ಭಕ್ತರ ಪ್ರವೇಶ ನಿರ್ಬಂಧಿಸಿ ನಡೆಸಲಾಗುತ್ತದೆ ಎಂದು ಸಚಿವರು ಹೇಳಿರುವರು.


