ಮಂಜೇಶ್ವರ: ಕರ್ನಾಟಕ ಎಸ್.ಎಸ್.ಎಲ್.ಸಿ. ಪರೀಕ್ಷೆ ಗುರುವಾರ ಆರಂಭಗೊಂಡಿದ್ದು, ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಸಕಲ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವು ವಿದ್ಯಾರ್ಥಿಗಳಿಗೆ ತಲಪಲು ಹರಸಾಹಸಪಡಬೇಕಾಯಿತು.
ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ತಲಪಾಡಿ ಮೂಲಕ 147 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಬೇಕಾಗಿತ್ತು. ಆದರೆ ಗಡಿಗೆ ತಲುಪುವ ಹೊತ್ತಿಗೆ ಬಸ್ ಸಂಚರಿಸಿರುವುದರಿಂದಾಗಿ ಮೂವರು ವಿದ್ಯಾರ್ಥಿಗಳಿಗೆ ಪರೀಕ್ಷಾ
ಕೇಂದ್ರಕ್ಕೆ ತಲುಪಲು ಸಮಸ್ಯೆಯಾಯಿತು.
ವಿದ್ಯಾರ್ಥಿಗಳಲ್ಲಿ ಬೆಳಗ್ಗೆ 8.30 ಕ್ಕೆ ತಲಪಾಡಿಯ ಗಡಿಗೆ ತಲುಪಲು ತಿಳಿಸಿದ್ದು, ಆದರೆ ಸಮಯಕ್ಕೆ ಸರಿಯಾಗಿ ತಲುಪಲು ಬಸ್ ಸೌಕರ್ಯವಿಲ್ಲದ ಕಾರಣ ಕೆಲವರಿಗೆ ಸಮಸ್ಯೆಯಾಯಿತು. ಕೇರಳ ಸಾರಿಗೆ ಸಂಸ್ಥೆಯ ಎರಡು ಬಸ್‍ಗಳು ಬೆಳಗ್ಗೆ ತಲಪಾಡಿಗೆ ಪ್ರಯಾಣಿಸಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸ್ವಂತ ವಾಹನದಲ್ಲಿ ಸ್ಥಳಕ್ಕೆ ತಲುಪಿದ್ದರು. ಕೆಲವರು ಬಾಡಿಗೆ ವಾಹನಗಳಲ್ಲಿ ಗಡಿಗೆ ತಲುಪಿದ್ದರು. ಹೀಗೆ ತಲುಪುವಾಗ ಮಕ್ಕಳನ್ನು ಕೊಂಡು ಹೋಗಲು ತಲಪಾಡಿಯಲ್ಲಿ ಕರ್ನಾಟಕ ಸರ್ಕಾರ ಏರ್ಪಡಿಸಿದ್ದ ಸಾರಿಗೆ ಬಸ್‍ಗಳು ಪ್ರಯಾಣ ಬೆಳೆಸಿತ್ತು. ಇದರಿಂದಾಗಿ ಉದ್ಯಾವರ ನಿವಾಸಿ ಇಬ್ರಾಹಿಂ ಅವರ ಪುತ್ರ ಸಲ್ಮಾನ್, ತಲಪಾಡಿ ಬಳಿಯ ಬೆನೆಟ್ ಅವರ ಪುತ್ರ ರೆಯಾನ್, ಬಾಳ್ಯೂರಿನ ವಾಸಿಸುವ ಹಾಸಿಬ್ ಅವರಿಗೆ ಬಸ್ ತಪ್ಪಿಹೋಯಿತು. ಈ ಹಿನ್ನೆಲೆಯಲ್ಲಿ ಇವರನ್ನು ಖಾಸಗಿ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಯಿತು. ಸಲ್ಮಾನ ಅವರನ್ನು ಕರ್ನಾಟಕದ ಮಲ್ಲೇ ಸ್ವಾಮಿ ಅವರ ಕಾರಿನಲ್ಲೂ, ಹಾಸಿಬ್ ಅವರನ್ನು ಅಧ್ಯಾಪಕರ ಬೈಕ್‍ನಲ್ಲೂ, ರೆಯಾನ್ ಅವರನ್ನು ಬಾಡಿಗೆ ರಿಕ್ಷಾದಲ್ಲೂ ಪರೀಕ್ಷಾ ಕೇಂದ್ರವಾದ ಮಂಗಳೂರಿಗೆ ಕೊಂಡೊಯ್ಯಲಾಯಿತು.
ಇದರಲ್ಲಿ ಹಾಸಿಬ್ ಬಂಟ್ವಾಳ ನಿವಾಸಿಯಾಗಿದ್ದು, ಕೋವಿಡ್ ಲಾಕ್‍ಡೌನ್‍ಗೂ ಮುಂಚಿತ ಬಾಕ್ರಬೈಲ್‍ನಲ್ಲಿರುವ ಅಜ್ಜಿ ಮನೆಗೆ ಬಂದು ಬಾಕಿಯಾಗಿದ್ದರು.
ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ನಡೆಸಿದ ವ್ಯವಸ್ಥೆಯನ್ನು ತಿಳಿಯಲು ಹಾಗು ಸಹಾಯ ಮಾಡಲು ಬಿಜೆಪಿ ಹಾಗು ಕಾಂಗ್ರೆಸ್‍ನ ನಾಯಕರು, ವಿವಿಧ ಸಂಘಟನೆಗಳ ನಾಯಕರು ತಲಪಾಡಿ ಗಡಿಗೆ ಬೆಳಗ್ಗೆ ತಲುಪಿದ್ದರು.

