ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ನೇತೃತ್ವದಲ್ಲಿ ತೃತೀಯ ಹಂತದ ಕಾರ್ಯಕ್ರಮ ಆನ್ ಲೈನ್ ಬಯಲಾಟ ನಿನ್ನೆ ಪ್ರಸ್ತುತಿಗೊಂಡಿತು.
ಯೂ ಟ್ಯೂಬ್ ಲೈವ್ ಯಕ್ಷಗಾನ ಬಯಲಾಟದ ಎರಡನೇಯ ಭಾನುವಾರದ ನೇರ ಪ್ರಸಾರ ಉದ್ಘಾಟನೆಯನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಉದ್ಯಮಿ ನಿವೇದಿಪ್ರೇಮ್ ಶೆಟ್ಟಿ ಸುರತ್ಕಲ್, ಉದಯ ಪೂಜಾರಿ ಮಂಗಳೂರು, ಶ್ರೀಧರ ಶೆಟ್ಟಿ ಗುರ್ಮೆ, ಕೃಷ್ಣೇ ಗೌಡ, ನಿವೇದಿತಾ ಶೆಟ್ಟಿ, ವಿನೋದ್‍ಕುಮಾರ್ ಬೊಳ್ಳೂರು, ಉದಯಕುಮಾರ್ ಶೆಟ್ಟಿ ಹಾಗೂ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿದರು.ಪಟ್ಲ ಸತೀಶ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ಮಂದಾರ್ತಿ ಮೇಳದ ಅಶಕ್ತ ಕಲಾವಿದ ಸುರೇಶ್ ಕುಲಾಲ್, ಮೇಗರವಳ್ಳಿ ಮೇಳದ ವೆಂಕಟರಮಣ ಹನುಮಂತ ಗೌಡ ಅವರಿಗೆ ವಿಮಾ ಮೊತ್ತದ ನೆರವು ಮತ್ತು ಮಂದಾರ್ತಿ ಮೇಳದ ಉದಯ ಶೆಟ್ಟಿ ಅಜ್ರಿ ಅವರ ಪುತ್ರಿಯ ವಿವಾಹ ಧನಸಹಾಯ, ಕಟೀಲು ಮೇಳದ ಬೆಳ್ಳಾರೆ ಮಂಜುನಾಥ ಭಟ್ ಅವರಿಗೆ ಆರ್ಥಿಕ ಸಹಾಯಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಡಗುತಿಟ್ಟು ಕಲಾವಿದರಿಂದ ಭೀಷ್ಮ ವಿಜಯ ಆಖ್ಯಾಯಿಕೆಯ ಪ್ರದರ್ಶನ ನಡೆಯಿತು.


