ತಿರುವನಂತಪುರ: ಇದೊಂದು ವಿಚಿತ್ರವಾದರೂ ನಿಜ. ಸಂಕಟ ಬಂದಾಗ ವೆಂಕಟರಮಣ ಎಂದು ಜನ ಕೊನೆಗೆ ದೇವರ ಮೊರೆ ಹೋಗುವುದನ್ನು ಕೇಳಿದ್ದೇವೆ. ಇಲ್ಲೊಬ್ಬರು, ವೈರಸ್ ಮೊರೆ ಹೋಗಿದ್ದಾರೆ.
ಈ ಲೇಖನದ ಕಥಾನಾಯಕ ಅನಿಲನ್. ಈತ ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಾಲ್ ನಿವಾಸಿ. ಕೊರೊನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಿರುವ ಈ ಹೊತ್ತಿನಲ್ಲಿ, ಕೊರೊನಾ ವೈರಸ್ ಗೊಂದು ವಿಗ್ರಹ ನಿರ್ಮಿಸಿ, ಅದಕ್ಕೆ ತನ್ನ ಮನೆಪಕ್ಕ ಪುಟ್ಟ ಗುಡಿಯನ್ನು ಕಟ್ಟಿ, ದಿನಾ ಪೂಜೆ ಮಾಡುತ್ತಿದ್ದಾರೆ ಅನಿಲನ್.
ಕೊರೊನಾ ವೈರಸ್ ಅನ್ನೇ ಹೋಲುವ ವಿಗ್ರಹವನ್ನು ನಿರ್ಮಿಸಿ ಪೂಜಿಸುತ್ತಿರುವ ಅನಿಲನ್, "ಕೊರೊನಾ ವಾರಿಯರ್ಸ್ ಗಳು ಈ ವೈರಸ್ ಹತೋಟಿಗೆ ತರಲು ಒದ್ದಾಡುತ್ತಿದ್ದಾರೆ. ಲಸಿಕೆ ಕಂಡು ಹಿಡಿಯಲು ತುಂಬಾ ಪ್ರಯತ್ನವನ್ನು ಪಡುತ್ತಿದ್ದಾರೆ. ಈ ಜಗತ್ತಿನ ಸುರಕ್ಷತೆಗಾಗಿ, ನಾನು ಈ ವೈರಸ್ ಅನ್ನೇ ದೇವತೆಯೆಂದು ಪೂಜಿಸುತ್ತಿದ್ದೇನೆ"ಎಂದು ಹೇಳುತ್ತಾರೆ ಇವರು.
ಮಹೂತರ್ಂ ಚಾರಿಟೇಬಲ್ ಟ್ರಸ್ಟ್ ಅನ್ನು ಹೊಂದಿರುವ ಅನಿಲನ್, "ವೈರಸ್ ನಲ್ಲಿಯೂ ದೇವರು ಸರ್ವವ್ಯಾಪಿ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾಗಿ, ನಾನು ವೈರಸ್ ಅನ್ನು ದೇವತೆಯೆಂದು ಪೂಜೆ ಸಲ್ಲಿಸುತ್ತಿದ್ದೇನೆ" ಎಂದು ಹೇಳುತ್ತಾರೆ. "ಕೊರೊನಾ ವೈರಸ್ ವಿಚಾರದಲ್ಲಿ ರಾಜಕೀಯ ಪಕ್ಷಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಇದಕ್ಕೆ ನನ್ನ ವಿರೋಧವಿದೆ. ಆ ಕಾರಣಕ್ಕಾಗಿಯೇ ನಾನು ಗುಡಿ ಕಟ್ಟಿದ್ದೇನೆ. ರಾಜಕೀಯದವರನ್ನು ಇಲ್ಲಿಗೆ ಬರಲು ಬಿಡುವುದಿಲ್ಲ"ಎಂದು ಆಕ್ರೋಶವನ್ನು ಅನಿಲ್ ವ್ಯಕ್ತಪಡಿಸುತ್ತಾರೆ.
ಪ್ರತೀದಿನ ಕೊರೊನಾ ದೇವತೆಯ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ಅನಿಲನ್, ಸದ್ಯ ಇಲ್ಲಿಗೆ ಯಾರನ್ನೂ ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ. ಈ ವೈರಸಿನ ಆಶೀರ್ವಾದ ಬೇಡಲು ಬರುವವರು, ಸಮಾಜಮುಖಿ ಕೆಲಸ ಏನಾದರೂ ಮಾಡಿರಬೇಕು ಎನ್ನುವುದು ಅನಿಲನ್ ಅವರ ನಿಲುವು.


