ಬೀಜಿಂಗ್: ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಲು ಭಾರತ- ಚೀನಾ ಒಪ್ಪಿದ್ದು, ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆ ಆಗಬಾರದು ಎಂದು ಈ ಹಿಂದೆ ಉಭಯ ದೇಶಗಳ ನಾಯಕರು ತೆಗೆದುಕೊಂಡಿದ್ದ ಒಮ್ಮತದ ನಿರ್ಧಾರವನ್ನು ಅನುಷ್ಠಾನಗೊಳಿಸುವ ಅಗತ್ಯ ಇದೆ ಎಂದು ಸೋಮವಾರ ಚೀನಾ ಹೇಳಿದೆ.
ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಉಭಯ ದೇಶಗಳ ನಡುವೆ ನಡೆದ ಉನ್ನತ ಸೇನಾ ಕಮಾಂಡರ್ ಸಭೆಯ ನಂತರ ಚೀನಾ ದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ.
ನೈಜ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‍ಎಸಿ) ಶಾಂತಿ ಕಾಪಾಡಲು ಮತ್ತು ಮಾತುಕತೆಯ ಮೂಲಕ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಚೀನಾ ಮತ್ತು ಭಾರತ ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ. ಜೂನ್ 6ರಂದು ಚುಸುಲ್ ಮೊಲ್ಡೊ ಪ್ರದೇಶದಲ್ಲಿ ಎರಡೂ ದೇಶಗಳ ಕಮಾಂಡರ್‍ಗಳ ನಡುವೆ ಮಾತುಕತೆ ನಡೆಯಿತು. ಗಡಿಯಲ್ಲಿನ ಪರಿಸ್ಥಿತಿ ಚರ್ಚಿಸಲು ಎರಡೂ ಕಡೆಯ ರಾಜತಾಂತ್ರಿಕ ಹಾಗೂ ಸೇನಾ ಪ್ರಮುಖರು ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಹು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‍ಪಿಂಗ್ ನಡುವೆ ಈ ಹಿಂದೆ ನಡೆದಿದ್ದ ಎರಡು ಅನೌಪಚಾರಿಕ ಮಾತುಕತೆಯನ್ನು ಉಲ್ಲೇಖಿಸಿದ ಅವರು,ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಹೆಚ್ಚು ವಿಶ್ವಾಸ ಬೆಳೆಸುವ ಕ್ರಮಗಳನ್ನು ಉಭಯ ದೇಶಗಳ ಸೇನೆಗಳು ತೆಗೆದುಕೊಳ್ಳಲಿವೆ. ಈ ಮೂಲಕ ಗಡಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.


