ಕೊಚ್ಚಿ: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲಕರು ಬೇಡಿಕೆ ಇರಿಸಿದ್ದ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಪ್ರಯತ್ನವನ್ನು ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ತಡೆಹಿಡಿದಿದೆ. ವಿಭಾಗೀಯ ಪೀಠವು ಬಸ್ ದರವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಈ ಹಿಂದಿನ ಏಕ ಸದಸ್ಯ ಬೆಂಚ್ ನೀಡಿದ್ದ ಆದೇಶವನ್ನು ತಡೆಹಿಡಿದಿದೆ.
ಮಾಲೀಕರ ವಾದವನ್ನು ಕೇಳಿದ ಬಳಿಕ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್‍ನ ನ್ಯಾಯಪೀಠ ನ್ಯಾಯಮೂರ್ತಿ ಎಂ.ರಾಮಚಂದ್ರನ್ ಆಯೋಗ ನಿರ್ದೇಶನ ನೀಡಿದೆ.
ಬಸ್‍ನಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಮಾತ್ರ ಸಂಚಾರ ಅನುಮತಿ ಇರುವುದರಿಂದ ಸರ್ಕಾರ ಕನಿಷ್ಠ ಶುಲ್ಕವನ್ನು 8 ರೂ.ನಿಂದ 12 ರೂ.ಗೆ ಹೆಚ್ಚಿಸಿದೆ. ಒಂದು ಕಿ.ಮೀ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಿಸಲಾಗಿತ್ತು. ಆದರೆ, ಬಸ್ ದರವನ್ನು 8 ರೂ.ಗೆ ಸರ್ಕಾರದ ನಿದೇಶಾನುಸಾರ ಇಳಿಸುವ ಕ್ರಮದಿಂದ ಬೇಸತ್ತ ಬಸ್ ಮಾಲಕರು ಈ ಬಗ್ಗೆ ತಮ್ಮ ಅಸಮಧಾನ ಪ್ರಕಟಿಸಿದ್ದರು. ಅಗ್ಗದ ದರದಲ್ಲಿ ಬಸ್ ಸಂಚಾರ ಸಾಧ್ಯವಿಲ್ಲ ಎಂದು ಹೇಳಿ ರಾಜ್ಯದ ಖಾಸಗೀ ಬಸ್ ಗಳು ಸಂಚಾರ ಮೊಟಕುಗೊಳಿಸಿದ್ದರು. ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಗರಿಷ್ಠ ಶುಲ್ಕ ವಿಧಿಸಬಹುದು ಎಂದು ಈ ಹಿಂದಿನ ಏಕ ಸದಸ್ಯ ಪೀಠದ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಈ ಆದೇಶವನ್ನು ವಿಭಾಗೀಯ ಪೀಠ ತಡೆಹಿಡಿದಿದೆ.
ಬಸ್ ದರವನ್ನು ಗರಿಷ್ಠ ಮಟ್ಟಕ್ಕೆ ಲಾಕ್ ಡೌನ್ ಮುಗಿಯುವ ವರೆಗೆ ಹೆಚ್ಚಿಸಬಹುದೆಂದು ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಕೋವಿಡ್ ಲಾಕ್ ಡೌನ್ ನಿಂದ ಉಂಟಾದ ಅಸಾಮಾನ್ಯ ಪರಿಸ್ಥಿತಿಯಿಂದಾಗಿ ಬಸ್ ದರವನ್ನು ಕಡಿಮೆಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸರ್ಕಾರ ವಾದಿಸಿದೆ. ತೆರಿಗೆದಾರರಿಗೆ ಮೂರು ತಿಂಗಳಿನಿಂದ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಬಸ್ ಪ್ರಯಾಣಕ್ಕೆ ಎಲ್ಲಾ ಆಸನಗಳಲ್ಲೂ ಪ್ರಯಾಣಿಕರಿಗೆ ಕುಳಿತಿರುವ ವ್ಯವಸ್ಥೆ ಇರುವುದರಿಂದ ಬಸ್ ಮಾಲಕರಿಗೆ ಆರ್ಥಿಕವಾಗಿ ಹೊರೆಯಾಗುವುದಿಲ್ಲ ಎಂದು ಸರ್ಕಾರ ಗಮನಸೆಳೆದಿದೆ. ಮೋಟಾರು ವಾಹನ ಕಾನೂನನ್ನು ಬಸ್ ಶುಲ್ಕ ಸೇರಿದಂತೆ ಸರ್ಕಾರ ನಿರ್ಧರಿಸಬಹುದು ಎಂದು ಸರ್ಕಾರ ತನ್ನ ಮನವಿಯಲ್ಲಿ ತಿಳಿಸಿದೆ.


