ಬದಿಯಡ್ಕ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಿಂದ ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ತೆಂಕುತಿಟ್ಟಿನ ಕಲಾವಿದರಿಗೆ ಮತ್ತು ಯಕ್ಷಗಾನ ಪ್ರೇಕ್ಷಕರ ಮನೋಲ್ಲಾಸಕ್ಕಾಗಿ ಮೂರು ದಿನಗಳ ಆನ್ ಲೈನ್ ಯಕ್ಷಗಾನ ಪ್ರದರ್ಶನ ಗುರುವಾರ ಪೆರಡಾಲ ಉದನೇಶ್ವರ ದೇವಾಲಯ ಪರಿಸರದಲ್ಲಿ ಕೋವಿಡ್ ನಿರ್ಬಂಧ ಅನುಸಾರ ನಡೆಯಿತು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕøತಿಕ ಪ್ರತಿಷ್ಠಾನ ಉಡುಪಿ ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರು ಇವರ ಸಹಕಾರದೊಂದಿಗೆ ಆನ್ ಲೈನ್ ಯಕ್ಷಗಾನ ಆಯೋಜಿಸಲಾಗಿದೆ. ಧಾತ್ರಿ ಮೀಡಿಯಾ ಬೆಂಗಳೂರು ಮೀಡಿಯಾ ಪಾಲುದಾರರಾಗಿದ್ದು ವರ್ಣ ಸ್ಟುಡಿಯೊ ನೀರ್ಚಾಲು ಚಿತ್ರೀಕರಣ ನಿರ್ವಹಿಸುತ್ತಾರೆ.
ಪ್ರತಿದಿನ ಸಂಜೆ 5.30ರಿಂದ ರಾತ್ರಿ ಗಂಟೆ 7ರ ವರೆಗೆ ನೇರ ಪ್ರಸಾರ ನಡೆಯಲಿದ್ದು, ಗುರುವಾರ ಕಂಸವಧೆ ಆಖ್ಯಾಯಿಕೆಯ ಪ್ರದರ್ಶನ ನಡೆಯಿತು. ಆರಂಭದಲ್ಲಿ ಶ್ರೀಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಸಿರಿಬಾಗಿಲು ಪ್ರತಿಷ್ಠಾನದ ನಿರ್ದೇಶಕ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಉದ್ಯಮಿ ಮಂಜುನಾಥ ಡಿ.ಮಾನ್ಯ, ಪೆರಡಾಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಮಚ್ಚಿಕ್ಕಾನ, ಸದಸ್ಯರಾದ ವೆಂಕಟರಮಣ ಭಟ್ ಚಂಬಲ್ತಿಮಾರ್, ಜಗನ್ನಾಥ ರೈ ಪೆರಡಾಲ ಉಪಸ್ಥಿತರಿದ್ದರು.
ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಪಡ್ರೆ ಶ್ರೀಧರ, ನೇರೋಳು ಗಣಪತಿ ನಾಯಕ್, ಉದಯ ಕಂಬಾರ್ ಸುರೇಶ್ ಸಹಕರಿಸಿದರು. ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ದಿವಾಣ ಶಿವಶಂಕರ ಭಟ್, ಮವ್ವಾರು ಬಾಲಕೃಷ್ಣ ಮಣಿಯಾಣಿ, ಹರೀಶ ಶೆಟ್ಟಿ ಮಣ್ಣಾಪು, ಶೇಖರ ಜಯನಗರ, ಶಿವಾನಂದ ಪೆರ್ಲ, ಶಿವರಾಜ ಪೆರ್ಲ ಸಹಕರಿಸಿದರು.
ಶುಕ್ರವಾರ ಸೀತಾಕಲ್ಯಾಣ ಪ್ರಸಂಗದ ಪ್ರದರ್ಶನ ನಡೆಯಿತು. ಇಂದು(ಜೂ.13) ಇಂದ್ರಜಿತುಕಾಳಗ ಪ್ರಸಂಗ ಪ್ರಸ್ತುತಿಗೊಳ್ಳಲಿದೆ. ಪ್ರದರ್ಶನಕ್ಕೆ ಕೊಲ್ಲಂಗಾನ ಮೇಳ ವೇಶಭೂಷಣ ಒದಗಿಸುತ್ತಿದೆ. ಈ ಹಿಂದೆ ಕೊರೊನಾಸುರ ಕಾಳಗ ಯಕ್ಷ ಜಾಗೃತಿ , ಕೊರೊನಾ ಜಾಗೃತಿ ಬಗ್ಗೆ ಯಕ್ಷಗಾನ ಕಲಾವಿದರಿಗೆ ಪ್ರಬಂಧ ಸ್ಪರ್ಧೆ ಪ್ರತಿಷ್ಠಾನ ಏರ್ಪಡಿಸಿರುವುದು ಪ್ರಶಂಸೆಗೆ ಪಾತ್ರವಾಗಿತ್ತು.



