ತಿರುವನಂತಪುರ: ಜಗತ್ತೇ ಬೆರಗಾಗುವಂತೆ ಕೋವಿಡ್ ವೈರಸ್ ನಿಯಂತ್ರಣ ಕಾರ್ಯಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ಕೇರಳದ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರನ್ನು ಪುರಸ್ಕಾರವಿತ್ತು ಗೌರವಿಸಿ ವಿಶಿಷ್ಟತೆ ಮೆರೆದಿದೆ.
ವಿಶ್ವಸಂಸ್ಥೆ (ಯುಎನ್)ನಿನ್ನೆ ಆಯೋಜಿಸಿದ್ದ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ 2020 ದಿನಾಚರಣೆಯ ಸಮಿತಿಯ ಚರ್ಚೆಯಲ್ಲಿ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಭಾಗವಹಿಸಿದ್ದರು.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಕೋವಿಡ್ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ಎದುರಿಸಿದ ವಿಶ್ವ ನಾಯಕರೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ರಾಜ್ಯಪಾಲರು, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಮತ್ತು ಯುಎನ್ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು.
ವಿಶ್ವ ಸಾರ್ವಜನಿಕ ದಿನದಂದು ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕೋವಿಡ್ ವಿರುದ್ಧ ಸಮರೋಪಾದಿಯ ಕಾರ್ಯಚಟುವಟಿಕೆಗಳ ಮೂಲಕ ಯಶಸ್ವಿಯಾಗಿ ಮುನ್ನಡೆದ ತಜ್ಞರು ಮತ್ತು ವಿಶ್ವ ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದರು. ಕೇರಳದಲ್ಲಿ ಕೋವಿಡ್ ತಡೆಗಟ್ಟುವ ಚಟುವಟಿಕೆಗಳು ವಿಶ್ವದ ಗಮನ ಸೆಳೆದಿದೆ. ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರ ಕಾರ್ಯವನ್ನು ಶ್ಲಾಘಿಸುವ ಹಲವಾರು ವರದಿಗಳು ಈಗಾಗಲೇ ವಿದೇಶಿ ಮಾಧ್ಯಮಗಳು ಪ್ರಕಟಗೊಂಡಿವೆ.
ಪ್ಯಾನಲ್ ಚರ್ಚೆಯಲ್ಲಿ(ವ್ಯೆಬಿನಾರ್) ಆರೋಗ್ಯ ಸಚಿವರು ಕೇರಳದ ಪರಿಸ್ಥಿತಿ ಮತ್ತು ಕೋವಿಡ್ ತಡೆಗಟ್ಟುವಿಕೆಯ ಯೋಜನೆಗಳನ್ನು ಈ ಹಿಂದೆಯೇ ಬಿಬಿಸಿ ಆಯೋಜಿಸಿದ್ದ ನೇರ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಕೋವಿಡ್ ಪ್ರತಿರೋಧದ ಕೇರಳ ಮಾದರಿ ಬಿಬಿಸಿ ವಲ್ರ್ಡ್ ನ್ಯೂಸ್ ವಿಭಾಗದಲ್ಲಿ ಪ್ರಸಾರವಾಗಿತ್ತು. ಅನೇಕ ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಕೆ.ಕೆ.ಶೈಲಜಾ ಅವರನ್ನು ಹೊಗಳಿದ ಕವರ್ ಸ್ಟೋರಿಗಳನ್ನೂ ಈಗಗಲೇ ಬರೆದಿರುವುದು ಉಲ್ಲೇಖಾರ್ಹ. ಇದರ ನಂತರ ಕೇರಳ ಮಾದರಿ ಕೋವಿಡ್ ತಡೆಗಟ್ಟುವ ಕಾರ್ಯಕ್ರಮವನ್ನು ಇತರ ರಾಜ್ಯಗಳು ಅಳವಡಿಸಿಕೊಂಡವು.



