ಕುಂಬಳೆ: ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರ ಕಾರನ್ನು ತಪ್ಪಿ ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.
ಕುಂಬಳೆಯಲ್ಲಿ ನೂತನವಾಗಿ ನಿರ್ಮಿಸಿದ ಖಾಸಗೀ ಆಸ್ಪತ್ರೆಯೊಂದರ ಉದ್ಘಾಟನೆಗೆ ಗುರುವಾರ ಸಂಜೆ ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ಆಗಮಿಸಿದ್ದರು. ಉದ್ಘಾಟನೆಯ ಬಳಿಕ ಬದಿಯಡ್ಕ ರಸ್ತೆಯಲ್ಲಿ ಸಂಚರಿಸುತ್ತಿರುವಂತೆ ಸಿಪಿಎಂ-ಡಿವೈಎಫ್‍ಐ ಪಕ್ಷದ ಕಾರ್ಯಕರ್ತರ ತಂಡವೊಂದು ಹಠಾತ್ ಕಾರೊಂದರಲ್ಲಿ ಆಗಮಿಸಿ ಸಂಸದರ ಕಾರನ್ನು ತಡೆಹಿಡಿದರು. ಆದರೆ ಈ ಸಂದರ್ಭ ಸಿಪಿಎಂ-ಡಿವೈಎಫ್‍ಐ ಕಾರ್ಯಕರ್ತರು ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರ ಹೆಸರೆತ್ತಿ ಪ್ರತಿಭಟನೆ ಕೂಗಿ ಗೊಂದಲ ಸೃಷ್ಟಿಸಿದರು.
ಏನಾಯಿತು?
ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರು ಯಾವುದೋ ಭೂಮಿಯನ್ನು ಪರಭಾರೆ ಮಾಡಿದ್ದಾರೆಂದು ಡಿವೈಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು.ಶಾಸಕರು ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿರುವರೆಂದು ತಿಳಿದ ಕಾರ್ಯಕರ್ತರು ಹಠಾತ್ ಪ್ರತಿಭಟನೆಗೆ ಇಳಿದಿದ್ದು ಸಂಸದರ ಕಾರು ಹಾಗೂ ಶಾಸಕರ ಕಾರುಗಳು ಯಾವುದೆಂಬ ಕನಿಷ್ಠ ಅರಿವಿರದೆ ಸಂಸದರ ಕಾರನ್ನು ಶಾಸಕರ ಕಾರೆಂದು ಭಾವಿಸಿ ನಡೆಸಿದ ಪ್ರತಿಭಟನೆ ಪ್ರಹಸನವಾಯಿತು.
ಬಳಿಕ ಪೋಲೀಸರು ಆಗಮಿಸಿ ಗುಂಪನ್ನು ಚದುರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಪಕ್ಷವೊಂದರ ಯುವ ಕಾರ್ಯಕರ್ತರಿಗೆ ತಿಳುವಳಿಕೆಯ ಕೊರತೆ ಸಾಕಷ್ಟಿದೆ. ತಂಡದಲ್ಲಿ ಡಿವೈಎಫ್‍ಐ ಕುಂಬಳೆ ಪರಿಸರದ ನೇತಾರನೆಂದು ಹೇಳಿಕೊಳ್ಳುವ ವಕೀಲನೂ ಒಬ್ಬನಿರುವುದಾಗಿ ತಿಳಿದುಬಂದಿದ್ದು, ಆತನ ವಕೀಲಿ ಪದವಿ ಸಂಶಯಾಸ್ಪದವಾಗಿದೆ. ಕಾರಣ ಶಾಸಕ ಮತ್ತು ಸಂಸದರ ಕಾರಿನ ಮುಂಭಾಗದ ನಾಮಫಲಕವನ್ನೂ ಓದಲಾರದ ಅಲ್ಪಜ್ಞಾನಿ ಇಂತಹ ಅವಾಂತರ ಸೃಷ್ಟಿಸಿರುವುದು ಹೇಯಕರ ಎಂದಿರುವರು.
ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಮಾಜಿ ಶಾಸಕ, ಸಿಪಿಎಂ ಮುಖಂಡ ನ್ಯಾಯವಾದಿ ಸಿ.ಎಚ್.ಕುಂಞÂಂಬು ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.


