ತಿರುವನಂತಪುರ: ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆ(ಪಿ.ಆರ್.ಡಿ) ತಂಡದ ಪ್ರಮುಖ ಜವಾಬ್ದಾರಿಯಾದ ನಕಲಿ ಸುದ್ದಿಗಳ ತನಿಖೆಯ ತಂಡದಲ್ಲಿ ವಿವಾದಿತ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಅವರನ್ನು ನೇಮಿಸಲು ಸರ್ಕಾರ ಸೂಚನೆ ನೀಡಿ ಆಶ್ಚರ್ಯಕ್ಕೀಡುಮಾಡಿದೆ. ಅವರು ಆರೋಗ್ಯ ಇಲಾಖೆಯ ಪ್ರತಿನಿಧಿಯಾಗಿ ಫ್ಯಾಕ್ಟ್ ಚೆಕ್ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಶ್ರೀರಾಮ್ ವೆಂಕಟರಾಮನ್ ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಕಳೆದ ವರ್ಷ ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದ ಕಾರು ಅಪಘಾತ ಪ್ರಕರಣವಾದ ಪತ್ರಕರ್ತ ಕೆ.ಎಂ.ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ್ ವೆಂಕಟರಾಮನ್ ಅಮಾನತುಗೊಂಡಿದ್ದರು. ಅಮಾನತುಗೊಂಡ ಬಳಿಕ ಅವರನ್ನು ಕಳೆದ ಮಾರ್ಚ್‍ನಲ್ಲಿ ಮತ್ತೆ ಆರೋಗ್ಯ ಇಲಾಖೆಗೆ ನಿಯುಕ್ತಿಗೊಳಿಸಲಾಗಿತ್ತು. ಬಳಿಕ ಕೋವಿಡ್ ಚಟುವಟಿಕೆಗಳನ್ನು ಸಂಘಟಿಸಲು ಶ್ರೀರಾಮ್‍ಗೆ ವಾರ್ ರೂಂ ಮತ್ತು ಸಿ.ಎಫ್.ಎಲ್.ಟಿ.ಸಿ ಜವಾಬ್ದಾರಿ ನೀಡಲಾಗಿತ್ತು.
ಇದರ ಬೆನ್ನಲ್ಲೇ ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಪ್ರಾರಂಭವಾದ ಪಿ.ಆರ್.ಡಿ. ಫ್ಯಾಕ್ಟ್ ಚೆಕ್ ವಿಭಾಗದಲ್ಲಿ ಶ್ರೀರಾಮ್ ವೆಂಕಟರಾಮನ್ ಅವರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ನಕಲಿ ಸುದ್ದಿಗಳನ್ನು ಕಂಡುಹಿಡಿಯಲು ಪಿಆರ್‍ಡಿ ಫ್ಯಾಕ್ಟ್ ಚೆಕ್ ಯುನಿಟ್ ಜೂನ್ ನಲ್ಲಿ ಪ್ರಾರಂಭಿಸಲಾಗಿತ್ತು.
ಪಿಆರ್‍ಡಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿರುವ ಈ ಸಮಿತಿಯಲ್ಲಿ ಪೆÇಲೀಸ್, ಐಟಿ, ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳೂ ಇದ್ದಾರೆ. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದು ಮತ್ತು ಸತ್ಯವನ್ನು ಪ್ರಕಟಿಸುವುದು ಹಾಗೂ ಸುದ್ದಿಗಳನ್ನು ಪೆÇಲೀಸರಿಗೆ ಹಸ್ತಾಂತರಿಸುವ ಜವಾಬ್ದಾರಿ ಅವರ ಮೇಲಿದೆ.
ಆರೋಗ್ಯ ಇಲಾಖೆಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪತ್ತೆ ಮಾಡುವ ಸಮಿತಿಯಲ್ಲಿ ಶ್ರೀರಾಮ್ ವೆಂಕಟರಾಮನ್ ಸದಸ್ಯರಾಗಿದ್ದಾರೆ ಎಂದು ವರದಿಯಾಗಿದೆ.


