HEALTH TIPS

‘ಅರುಣಾಚಲ ಪ್ರದೇಶ, ಲಡಾಖ್ ಭಾರತದಲ್ಲಿರುವುದು ಅಕ್ರಮ’ – ಚೀನಾ ಮತ್ತೆ ಕಿತಾಪತಿ

            ನವದೆಹಲಿ: ಗಡಿಭಾಗದ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಭಾರತ ನಿರ್ಮಿಸಿದ 44 ಸೇತುವೆಗಳ ಉದ್ಘಾಟನೆ ಆದ ಬೆನ್ನಲ್ಲೇ ಚೀನಾ ತನ್ನ ಸಿಟ್ಟನ್ನು ತೋರ್ಪಡಿಸಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶ ಭಾರತದಲ್ಲಿರುವುದು ಅಕ್ರಮ. ಇದನ್ನು ನಾವು ಒಪ್ಪುವುದಿಲ್ಲ. ಈ ವಿವಾದಾತ್ಮಕ ಪ್ರದೇಶಗಳಲ್ಲಿ ಮಿಲಿಟರಿ ಉದ್ದೇಶಕ್ಕಾಗಿ ಯಾವುದೇ ಸೌಕರ್ಯ ನಿರ್ಮಿಸುವುದಕ್ಕೂ ತಮ್ಮ ವಿರೋಧ ಇದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ ಎಂದು ಚೀನಾದ ಸರ್ಕಾರ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

         ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಲು ಭಾರತವೇ ಮೂಲ ಕಾರಣ. ಗಡಿ ಪ್ರದೇಶಗಳಲ್ಲಿ ವಿವಾದ ಸಂಕೀರ್ಣಗೊಳ್ಳುವಂಥ ಯಾವುದೇ ಕ್ರಮವನ್ನು ಎರಡೂ ಕಡೆಯವರೂ ತೆಗೆದುಕೊಳ್ಳಬಾರದು ಎಂದು ಇತ್ತೀಚಿನ ಮಾತುಕತೆಗಳಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೂ ಕೂಡ ವಿವಾದಿತ ಗಡಿಭಾಗದಲ್ಲಿ ಸೇನಾ ಬಳಕೆ ಉದ್ದೇಶದಿಂದ ಭಾರತ ಸೌಕರ್ಯಗಳನ್ನ ಮಾಡಿಕೊಳ್ಳುತ್ತಿದೆ. ವಿವಾದಿತ ಪ್ರದೇಶಗಳಲ್ಲಿ ಸೇನಾ ನಿಯೋಜನೆ ಹೆಚ್ಚಿಸುತ್ತಿದೆ ಎಂದು ಝಾವೋ ಹೇಳಿರುವುದು ವರದಿಯಾಗಿದೆ.
     ಭಾರತದಲ್ಲಿರುವ ಲಡಾಖ್, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳನ್ನ ಚೀನಾ ತನ್ನದು ಎಂದು ವಾದಿಸುತ್ತಿದೆ. ಈ ಮೂರು ಕೂಡ ಟಿಬೆಟ್​ಗೆ ಸೇರಿರುವಂಥವು ಎಂಬುದು ಅದರ ಅನಿಸಿಕೆ. ಈ ವರ್ಷ ಕೋವಿಡ್ ರೋಗ ಇಡೀ ಜಗತ್ತನ್ನು ಬಾಧಿಸಲು ಆರಂಭಿಸಿದ ಹೊತ್ತಲ್ಲೇ ಚೀನಾದ ಪಿಎಲ್​ಎ ಸೈನಿಕರು ಲಡಾಖ್​ನಲ್ಲಿ ಸ್ವಲ್ಪಸ್ವಲ್ಪವೇ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಇದು ಗೊತ್ತಾಗಿ ಭಾರತೀಯ ಸೇನೆ ತೀವ್ರ ಪ್ರತಿರೋಧ ಒಡ್ಡಿತು. ತತ್​ಪರಿಣಾಮವಾಗಿ ಚೀನಾದ ಸೇನಾ ಪಡೆಗಳು ಆಕ್ರಮಣಕಾರಿ ವರ್ತನೆ ತೋರಿ ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದರು. ಗಾಲ್ವನ್ ಕಣಿವೆಯಲ್ಲಿ ನಡೆದ ಅಂಥದ್ದೊಂದು ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು. ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಎರಡೂ ಕಡೆ ಸೇನೆಯ ವಿವಿಧ ಮಟ್ಟಗಳಲ್ಲಿ ಮಾತುಕತೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈಗಾಗಲೇ ಏಳು ಸುತ್ತುಗಳಾದರೂ ಎರಡೂ ಕಡೆ ಒಂದು ಸಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ
        ಇದೆಲ್ಲಾ ಆಗುತ್ತಿರುವ ಹೊತ್ತಲ್ಲೇ ಭಾರತ ತನ್ನ ಗಡಿಭಾಗಗಳಲ್ಲಿ ಮೂಲಸೌಕರ್ಯಗಳನ್ನ ಹೆಚ್ಚಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದೆ. ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತ 45 ಸೇತುವೆಗಳನ್ನ ನಿರ್ಮಿಸಿದೆ. ಇವು ಸೇನಾ ಪಡೆಗಳ ಸಾಗಾಟಕ್ಕೆ ಬಹಳ ಅನುಕೂಲ ಮಾಡಿಕೊಡಲಿವೆ. ಹಾಗೆಯೇ, ಹಿಮಾಚಲ ಪ್ರದೇಶದ ಡಾರ್ಚಾದಿಂದ ಲಡಾಖ್​ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. 290 ಕಿಮೀ ಉದ್ದದ ಈ ರಸ್ತೆ ಲಡಾಖ್​ನ ಸೇನಾ ನೆಲೆಗಳಿಗೆ ಸೈನಿಕರು ಮತ್ತು ಶಸ್ತ್ರಾಸ್ತ್ರಗಳ ಸಾಗಾಟಕ್ಕೆ ಬಹಳ ಸಹಾಯವಾಗುತ್ತದೆ. ಕಾರ್ಗಿಲ್ ಪ್ರದೇಶವನ್ನ ತಲುಪಲೂ ಈ ರಸ್ತೆ ಎಡೆ ಮಾಡಿಕೊಡುತ್ತದೆ. ಈ ರಸ್ತೆ ಸೇರಿದಂತೆ ಇನ್ನೂ ಹಲವು ಪ್ರಮುಖ ಯೋಜನೆಗಳು ಪ್ರಗತಿಯಲ್ಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries