ಬದಿಯಡ್ಕ: ದಿವಂಗತ ಡಾ.ವೈ.ಕೆ ಕೇಶವ ಭಟ್ ಅವರು ಕೈಗೊಳ್ಳದ ಅಭಿವೃದ್ಧಿ ಕಾರ್ಯಗಳಿಲ್ಲ. ಅವರು ಕುಗ್ರಾಮವನ್ನು ಸುಗ್ರಾಮವನ್ನಾಗಿಸಿದ ಧೀರ ಎಂದು ಏತಡ್ಕ ಮಹಿಳಾ ಸಮಾಜದ ಅಧ್ಯಕ್ಷೆ ಪಾರ್ವತಿ ಎಸ್ ಭಟ್ ಕಳೆಯತ್ತೋಡಿ ಅವರು ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಭಾನುವಾರ ಜರಗಿದ ಡಾ. ವೈ.ಕೆ ಕೇಶವ ಭಟ್ ಸಂಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕೇಶವ ಭಟ್ ಅವರು ಮಾಡಿದ ಪ್ರಮುಖ ಸಮಾಜ ಸೇವೆಗಳನ್ನು ಈ ಸಂದರ್ಭ ನೆನಪಿಸಿದರು.
ಇದೇ ಸಂದರ್ಭದಲ್ಲಿ ಏತಡ್ಕ ಅಂಗನವಾಡಿಯಲ್ಲಿ ಕಳೆದ 33 ವರ್ಷಗಳಿಂದ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿರುವ ವಿಜಯಲಕ್ಷ್ಮಿ ಸಿ ಅವರನ್ನು ಏತಡ್ಕ ಮಹಿಳಾ ಸಮಾಜದ ವತಿಯಿಂದ ಶಾಲು ಹೊದಿಸಿ ಚಿನ್ನದ ಉಂಗುರ, ಸ್ಮರಣಿಕೆ, ಹಣ್ಣು ಹಂಪಲು, ಪುಸ್ತಕಗಳನ್ನಿತ್ತು ಸನ್ಮಾನಿಸಲಾಯಿತು. ಸುಮತಿ ವೈ.ಕೆ ಅಭಿನಂದನ ಭಾಷಣ ಮಾಡಿದರು. ಡಾ.ರಮ್ಯಾ ದೂರವಾಣಿಯ ಮೂಲಕ ಶುಭ ಹಾರೈಸಿದರು. ಸನ್ಮಾನಿತರು ತಮ್ಮ ಅನುಭವಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಭಾಗವಹಿಸಿದವರಿಗೆ ಅಭಿನಂದನೆ ಸಲ್ಲಿಸಿ ಮಹಿಳಾ ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು. ಗೀತಾ ಎಂ ಭಟ್,ಶಶಿಪ್ರಭಾ ವರುಂಬುಡಿ,ಆಶಾ ಓಡಂಗಲ್ಲು,ಶ್ರೀನಿಕಾ,ಸುಮತಿ ಭಾವಗೀತೆಗಳನ್ನು ಹಾಡಿದರು.ಹೊಸ ಧ್ವನಿವರ್ಧಕ ವನ್ನು ಅಧ್ಯಕ್ಷರು ಉದ್ಘಾಟಿಸಿದರು.ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಆಶಾಗಂಗಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಏತಡ್ಕ ವಂದಿಸಿದರು. ಸುಬ್ರಹ್ಮಣ್ಯ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.





