ತಿರುವನಂತಪುರ: ಕೇರಳದಲ್ಲಿ ಕೋವಿಡ್ ನಿಬಂಧನೆಗಳಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದೆ. ಶಾಲೆಗಳನ್ನು ಹೊರತುಪಡಿಸಿ ಉದ್ಯೋಗ ಆಧಾರಿತ ಸಂಸ್ಥೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.
ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಟಿವಿಶನ್ ಟೆಂಟರ್ ಗಳು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರಲ್ಲಿ ನೃತ್ಯ-ಸಂಗೀತ ಶಾಲೆಗಳು ಮತ್ತು ಕಂಪ್ಯೂಟರ್ ಕೇಂದ್ರಗಳು ಸೇರಿವೆ.
ವರದಿಯ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳಾಗಿರುವ ವೃತ್ತಿಪರ ತರಬೇತಿ ಸಂಸ್ಥೆಗಳು, ನೃತ್ಯ ಶಾಲೆಗಳು, ಕಂಪ್ಯೂಟರ್ ಕೇಂದ್ರಗಳು ಮತ್ತು ಟಿವಿಶನ್ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಕೋವಿಡ್ ರಕ್ಷಣಾ ಚಟುವಟಿಕೆಗಳ ಮೇಲಿನ ನಿಬರ್ಂಧ ಸಂದರ್ಭದ ನಿಬಂಧನೆಗಳಿಂದ ಸರ್ಕಾರ ಸಡಿಲಗೊಳಿಸಿದೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳನ್ನು ಹೊರತುಪಡಿಸಿ, ಏಕಕಾಲದಲ್ಲಿ ಕೋಣೆಯ ವಿಸ್ತಾರತೆಯ ಅನುಸಾರ ಶೇಕಡಾ 50 ಕ್ಕೆ ಅಥವಾ ಗರಿಷ್ಠ 100 ಜನರಿಗೆ ಅವಕಾಶ ನೀಡಲಾಗಿದೆ.
ಆದರೆ ಚಿತ್ರಮಂದಿರಗಳ ತೆರೆಯುವಿಕೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರಕಟಣೆಗಳನ್ನು ನೀಡಿಲ್ಲ.
ಏತನ್ಮಧ್ಯೆ, ನವೆಂಬರ್ 23 ರಿಂದ ಶಾಲೆಗಳು ಮತ್ತೆ ತೆರೆಯುವುದಾಗಿ ದೇಶದ ಹಲವಾರು ರಾಜ್ಯಗಳು ಘೋಷಿಸಿದ್ದವು. ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿಗಳು ಮತ್ತು ಮಾನದಂಡಗಳಿಗೆ ಅನುಸಾರವಾಗಿ ತರಗತಿಗಳನ್ನು ನಡೆಸಲಾಗುವುದಾಗಿ ತಿಳಿಸಿದ್ದವು. ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ ಆನ್‍ಲೈನ್ ತರಗತಿಗಳು ಮುಂದುವರಿಯಲಿವೆ ಎಂದು ವರದಿಯಾಗಿದೆ. ಹಲವಾರು ರಾಜ್ಯಗಳಲ್ಲಿ ನವೆಂಬರ್ 23 ರಂದು ತರಗತಿಗಳು ಪ್ರಾರಂಭವಾಗಿವೆ. ಆದರೆ ಕೆಲವೆಡೆ ಮತ್ತೆ ಮುಂದೂಡಲಾಯಿತು. ಇದೇ ವೇಳೆ ಕೇರಳದಲ್ಲಿ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ.


