ಚಂಡೀಗಢ: ಗಡಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತಾ ಪಡೆ ನಿಯೋಜನೆ ಹೊಂದಿದ್ದರೂ ಕೂಡ ಪಂಜಾಬ್ ನ ರೈತರು ದೆಹಲಿಯ ಗಡಿಭಾಗಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದು, ಹರ್ಯಾಣದಲ್ಲಿ ಪೊಲೀಸ್ ಬ್ಯಾರಿಕೇಡ್ ನ್ನು ಮುರಿದು ಮುನ್ನುಗ್ಗಿದ್ದಾರೆ.
ಪೊಲೀಸರು ಅಶ್ರುವಾಯು ಸಿಡಿಸಿದರೂ ಪ್ರತಿಭಟನಾಕಾರರು ಕ್ಯಾರೇ ಅನ್ನದೆ ತಮ್ಮ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ನಿನ್ನೆ ಪ್ರತಿಭಟನಾಕಾರರು ನಗರಕ್ಕೆ ಪ್ರವೇಶಿಸಬಾರದೆಂದು ದೆಹಲಿ ಪೊಲೀಸರು ಭದ್ರತೆಯನ್ನು ವಿಸ್ತರಿಸಿದ್ದರು. ದೆಹಲಿ ಹರ್ಯಾಣ ಗಡಿಯಲ್ಲಿ ಸಿಂಗು ಎಂಬಲ್ಲಿ ಪೊಲೀಸರು ಮರಳು ತುಂಬಿದ ಟ್ರಕ್‌ಗಳು, ಜಲ ಫಿರಂಗಿಗಳು ಮತ್ತು ಮುಳ್ಳುತಂತಿಯ ಬೇಲಿಗಳನ್ನು ಹಾಕಿದ್ದರು. ಫರಿದಾಬಾದ್ ಮತ್ತು ಗುರುಗಾಂವ್ ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಆದರೂ ಎರಡು ಗುಂಪುಗಳಲ್ಲಿ ಬಂದ ಪ್ರತಿಭಟನಾ ನಿರತ ರೈತರು, ಸಿಂಘು ಮತ್ತು ಟಿಕ್ರಿ ಎಂಬಲ್ಲಿಗೆ ಆಗಮಿಸಿದರು. ಅಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದರು, ಆದರೂ ಪ್ರತಿಭಟನಾ ನಿರತ ರೈತರು ಕ್ಯಾರೇ ಅನ್ನಲಿಲ್ಲ. ನಾವು ದೆಹಲಿ ಪ್ರವೇಶಿಸುತ್ತೇವೆ. ನೂತನ ಕೃಷಿ ಮಸೂದೆಯನ್ನು ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯುವುದಿಲ್ಲ ಎಂದು ಪಂಜಾಬ್ ನ ಫತೇಗರ್ ಸಾಹಿಬ್ ನ ರೈತರು ಸಿಂಘು ಗಡಿಭಾಗದತ್ತ ತಲುಪಿ ಹೇಳಿದ್ದಾರೆ.
ಕಳೆದ ರಾತ್ರಿ ರೈತರು ಹಲವು ಪ್ರದೇಶಗಳಲ್ಲಿ ತಂಗಿದ್ದರು. ಪಾಣಿಪತ್, ಹರ್ಯಾಣಗಳಲ್ಲಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ ಎಂದು ತಿಳಿದುಬಂದಿದೆ.
ರೈತರ ಪ್ರತಿಭಟನೆ ಮಧ್ಯೆ ಹರ್ಯಾಣ-ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಂಘು ಗಡಿಯತ್ತ ವಾಹನಗಳು ಸಂಚರಿಸಲು ಪೊಲೀಸರು ಬಿಡುತ್ತಿಲ್ಲ. ಅಂತರಾಜ್ಯ ವಾಹನಗಳು ಪೂರ್ವ ಮತ್ತು ಪಶ್ಚಿಮ ಫೆರಿಫೆರಲ್ ಎಕ್ಸ್ ಪ್ರೆಸ್ ವೇ ಮೂಲಕ ಸಂಚಾರ ನಡೆಸಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

