ತಿರುವನಂತಪುರ: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಅವರಿಗೆ ಮತ್ತೊಂದು ನೋಟಿಸ್ ನೀಡಿದೆ. 10 ರಂದು ಹಾಜರಾಗುವಂತೆ ತಿಳಿಸಲಾಗಿದ್ದು ಇದು ಮೂರನೇ ಬಾರಿಗೆ ತನಿಖಾ ತಂಡ ರವೀಂದ್ರನ್ ಅವರಿಗೆ ನೋಟಿಸ್ ನೀಡುತ್ತಿದೆ.
ಕೆ ಪೋನ್ ಮತ್ತು ಲೈಫ್ ಮಿಷನ್ ಯೋಜನೆಗಳಲ್ಲಿನ ಕಪ್ಪು ಹಣದ ವಹಿವಾಟಿಗೆ ಸಂಬಂಧಿಸಿದಂತೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಇತರ ಆರೋಪಿಗಳ ಹೇಳಿಕೆಗಳಿಗೆ ಸಂಬಂಧಿಸಿ ರವೀಂದ್ರನ್ ಅವರಿಗೆ ಇಡಿ ನೋಟಿಸ್ ನೀಡಿದೆ. ವೈದ್ಯಕೀಯ ಕಾರಣಗಳಿಂದಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಈ ಹಿಂದೆ ರವೀಂದ್ರನ್ ಎರಡು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.
ಮೊದಲ ನೋಟಿಸ್ ನೀಡಿದಾಗ, ಕೋವಿಡ್ ಧನಾತ್ಮಕವಾಗಿದ್ದರಿಂದ ಅವರು ಹಾಜರಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಎರಡನೇ ನೋಟೀಸ್ ನೀಡಿದಾಗ ಇತರ ಆರೋಗ್ಯ ಸಮಸ್ಯೆಗಳಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿತ್ತು. ಇದನ್ನು ಅನುಸರಿಸಿ, ಡಿಸೆಂಬರ್ 10 ರಂದು ಹಾಜರಾಗುವಂತೆ ಮೂರನೇ ಬಾರಿ ನೋಟಿಸ್ ಕಳುಹಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಎರಡನೇ ಹಂತದ ಅದೇ ದಿನ ರವೀಂದ್ರನ್ ಅವರನ್ನು ವಿಚಾರಣೆಗೆ ಬರಲು ತಿಳಿಸಲಾಗಿದೆ. ಈ ಹಿಂದೆ, ಕೋವಿಡ್ ನಿಂದ ಚೇತರಿಸಿಕೊಂಡಿದ್ದರೂ ರವೀಂದ್ರನ್ ವಿಚಾರಣೆಗೆ ಹಾಜರಾಗದಿರುವುದು ಜನರಲ್ಲಿ ತಪ್ಪು ತಿಳುವಳಿಕೆಯನ್ನು ಉಂಟುಮಾಡುತ್ತದೆ ಎಂದು ಸಿಪಿಎಂ ಅಂದಾಜು ಮಾಡಿದೆ ಎಂದು ವರದಿಗಳಿವೆ. ಆರೋಗ್ಯ ಸ್ಥಿತಿ ಸುಧಾರಿಸಿದ ಕೂಡಲೇ ಹಾಜರಾಗುವುದು ಉತ್ತಮ ಎಂದು ಪಕ್ಷ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಮೂರನೇ ನೋಟೀಸ್ ನೀಡಿರುವುದರಿಂದ ಡಿ.10 ರಂದು ವಿಚಾರಣೆಗೆ ಹಾಜರಾಗುವರೇ, ಇಲ್ಲವೇ ಎಂದು ಕುತೂಹಲ ಮೂಡಿಸಿದೆ.


