ನವದೆಹಲಿ: ಬ್ರಿಟನ್ ಸೇರಿದಂತೆ ಹತ್ತು ಹಲವು ರಾಷ್ಟ್ರಗಳಲ್ಲಿ ಹೈಸ್ಪೀಡ್ ಕೊರೋನಾ ಪತ್ತೆಯಾಗಿ ಆತಂಕ ಹೆಚ್ಚಾಗಿರುವಾಗಲೇ ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಭಾನುವಾರ ಬೆಳಗ್ಗೆ 8ರವರೆಗೆ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 18,732 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ 1 ಲಕ್ಷದ ಗಡಿವರೆಗೆ ತಲುಪಿದ್ದ ದೈನಂದಿನ ಸೋಂಕು 19 ಸಾವಿರಕ್ಕಿಂದ ಕೆಳಕ್ಕೆ ಇಳಿಯುತ್ತಿರುವುದು 6 ತಿಂಗಳಲ್ಲಿ ಇದೇ ಮೊದಲಾಗಿದೆ.
ಮತ್ತೊಂದೆಡೆ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 3 ಲಕ್ಷಕ್ಕಿಂತ ಕೆಳಕ್ಕೆ ಬಂದಿದೆ. ಸದ್ಯ ದೇಶದಲ್ಲಿ 2,78,690 ಸಕ್ರಿಯ ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು 167 ದಿನಗಳಲ್ಲೇ ಅತಿ ಕಡಿಮೆ ಸಂಖ್ಯೆಯಾಗಿದೆ.
ದೇಶದಲ್ಲಿ ಮಂಗಳವಾರ 18,732 ಹೊಸ ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 1,01,87,850ಕ್ಕೆ ಏರಿಕೆಯಾಗಿದೆ,
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 279 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,47,622ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ಒಂದೇ ದಿನ 21,430 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರೊಂದಿಗೆ ಈ ವರೆಗೂ ಗುಣಮುಖರಾದವರ ಸಂಖ್ಯೆ 97,61,538ಕ್ಕೆ ಏರಿಕೆಯಾಗಿದೆ.
ಈ ನಡುವೆ ನಿನ್ನೆ ಒಂದೇ ದಿನ ದೇಶಾದ್ಯಂತ 9,43,368 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಭಾರತದಲ್ಲಿ ಒಟ್ಟಾರೆ 16,81,02,657 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.





