ನವದೆಹಲಿ: ಹೊಸ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಡಿಸೆಂಬರ್ 29ರಂದು ಕೇಂದ್ರ ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಪಿಟಿಐಗೆ ತಿಳಿಸಿದ್ದಾರೆ.
ದೆಹಲಿ ಗಡಿಯ ವಿಧೆಡೆ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮೂರೂ ಹೊಸ ಕೃಷಿ ಕಾಯ್ದೆಗಳ ರದ್ದತಿ ಮತ್ತು ಎಂಎಸ್‌ಪಿ( (ಸರ್ಕಾರವು ರೈತರಿಂದ ಖರೀದಿಸುವ ಬೆಳೆಗೆ ನೀಡುವ ಕನಿಷ್ಠ ಬೆಂಬಲ ಬೆಲೆ) ಖಾತ್ರಿ ವಿಷಯಗಳು ಸರ್ಕಾರದ ಜೊತೆಗಿನ ಮಾತುಕತೆಯಲ್ಲಿ ಪ್ರಮುಖ ಅಂಶಗಳಾಗಿತ್ತವೆ ಎಂದು ಭಾರತೀಯ ಕಿಸಾನ್ ಸಂಘದ ಹಿರಿಯ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವಂತೆ ಒತ್ತಾಯಿಸಿ ಹತ್ತಿರತ್ತಿರ ಒಂದು ತಿಂಗಳಿಂದ ಸಾವಿರಾರು ರೈತರ ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೃಷಿಯಲ್ಲಿ ಪ್ರಮುಖ ಸುಧಾರಣೆ ತರುವ ಮೂಲಕ ರೈತರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ, ರೈತರು ಮಾತ್ರ ಈ ಕಾಯ್ದೆಗಳು ರೈತರನ್ನು ಕಾರ್ಪೋರೇಟ್ ಕಂಪನಿಗಳ ಅಡಿಯಾಳಾಗಿಸುತ್ತವೆ. ಮಂಡಿ ಮತ್ತು ಎಂಎಸ್‌ಪಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ಆರೋಪಿಸುತ್ತಾರೆ.





