ತಿರುವನಂತಪುರಂ: ವಿರೋಧಪಕ್ಷವೇ ಇಲ್ಲದಂತೆ ಪಂಚಾಯಿತಿ ಸಮಿತಿಯೊಂದು ಸಂಪೂರ್ಣವಾಗಿ ಒಂದೇ ಪಕ್ಷದ ಪಾಲಾಗಿದೆ. ಎರ್ನಾಕುಲಂ ಜಿಲ್ಲೆಯ ಐಕ್ಕರನಾಡು ಪಂಚಾಯತಿಯಲ್ಲಿ 'ಟ್ವೆಂಟಿ20' ಪಕ್ಷ ತಾನು ಸ್ಪರ್ಧಿಸಿದ ಎಲ್ಲ 14 ಕ್ಷೇತ್ರಗಳಲ್ಲಿಯೂ ಜಯಗಳಿಸಿದೆ. ಕಿಟೆಕ್ಸ್ ಗ್ರೂಪರ್ ಎಂಬ ಉಡುಪು ತಯಾರಕಾ ಸಂಸ್ಥೆಯ ಸಂಘಟನೆಯಾದ ಟ್ವೆಂಟಿ20 ಎಂಬ ಹೆಸರಿನ ಪಕ್ಷ ಕಳೆದ 2015ರ ಚುನಾವಣೆಯಲ್ಲಿ ಗಮನ ಸೆಳೆದಿತ್ತು. ಈ ಬಾರಿ ಪಕ್ಷದ ಅಭ್ಯರ್ಥಿಗಳು ಸ್ಥಳೀಯ ಮಟ್ಟದಲ್ಲಿ ಮತ್ತಷ್ಟು ಸಾಧನೆ ತೋರಿಸಿದ್ದಾರೆ.
ಐಕ್ಕರನಾಡು ಪಂಚಾಯಿತಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿರೋಧಪಕ್ಷವೇ ಇಲ್ಲದಂತೆ ಎಲ್ಲ ಸೀಟುಗಳೂ ಪಕ್ಷವೊಂದರ ಪಾಲಾಗಿದೆ. ಕಾರ್ಪೊರೇಟ್ ಸಂಸ್ಥೆಯೊಂದರ ಬೆಂಬಲಿತ ಸಂಘಟನೆಯಾದ ಟ್ವೆಂಟಿ20 ಪಕ್ಷವು 2015ರ ಚುನಾವಣೆಯಲ್ಲಿ ಮೊದಲ ಸಲ ಅಖಾಡಕ್ಕೆ ಇಳಿದಿತ್ತು. ಕಿಳಕ್ಕಂಬಳಂ ಪಂಚಾಯತ್‌ನಲ್ಲಿ 19 ಸೀಟುಗಳ ಪೈಕಿ 17ರಲ್ಲಿ ಜಯಗಳಿಸಿತ್ತು. ಸಂಸ್ಥೆಯ ಅಧಿಕಾರಿಯೊಬ್ಬರ ಕೈಕೆಳಗೆ ಪಂಚಾಯಿತಿ ಆಡಳಿತ ನಡೆಸಿದ ಕಾರಣ ಅದು ತೀವ್ರ ಟೀಕೆಗೆ ಒಳಗಾಗಿತ್ತು.
ಮತ್ತೊಂದು ಖಾಸಗಿ ಸಂಘಟನೆ ವಿ4ಕೊಚ್ಚಿ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಯಾವುದೇ ಸೀಟುಗಳನ್ನು ಗೆಲ್ಲುವಲ್ಲಿ ಸಫಲವಾಗದೆ ಇದ್ದರೂ ಒಟ್ಟಾರೆ ಫಲಿತಾಂಶದಲ್ಲಿ ಪ್ರಭಾವ ಬೀರುವಂತೆ ಮತಗಳನ್ನು ಪಡೆದುಕೊಂಡಿದೆ.
ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ.


