ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳಲ್ಲಿ ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ತನ್ನ ನೆಲೆಯನ್ನು ಗಟ್ಟಿಗೊಳಿಸುವ ಬಿಜೆಪಿಯ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗಿದೆ. 'ತ್ರಿಶ್ಶೂರಿನ ಗುಜರಾತ್' ಎಂದೇ ಕರೆಸಿಕೊಳ್ಳುವ ಬಿಜೆಪಿಯ ಬಲ ಹೆಚ್ಚಿರುವ ವಾರ್ಡ್‌ನಲ್ಲಿಯೇ ಬಿಜೆಪಿ ಸೋಲು ಅನುಭವಿಸಿದೆ.
ಟೆಲಿವಿಷನ್ ಚರ್ಚೆಗಳಲ್ಲಿ ಬಿಜೆಪಿಯ ಜನಪ್ರಿಯ ಮುಖವಾಗಿದ್ದ, ಪಕ್ಷದ ಮೇಯರ್ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಅವರು ಕುಟ್ಟಂಕುಲಂಗರ ಕ್ಷೇತ್ರದಲ್ಲಿ 200 ಮತಗಳಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿ ಪಾಲಿಗೆ ಅತ್ಯಂತ ಸುರಕ್ಷಿತವಾಗಿರುವ ಕಾರಣಕ್ಕೆ ತ್ರಿಶ್ಶೂರಿನ ಗುಜರಾತ್ ಎಂದೇ ಈ ಸೀಟನ್ನು ಕರೆಯಲಾಗುತ್ತಿತ್ತು. ಆದರೆ ಇಲ್ಲಿಯೇ ಬಿಜೆಪಿ ಸೋಲು ಕಂಡಿರುವುದು ಪಕ್ಷಕ್ಕೆ ದೊಡ್ಡ ಆಘಾತ ಮೂಡಿಸಿದೆ. ತ್ರಿಶ್ಶೂರಿನಲ್ಲಿ ಬಿಜೆಪಿ 5, ಎಲ್‌ಡಿಎಫ್ 16 ಮತ್ತು ಯುಡಿಎಫ್ 13 ಸೀಟುಗಳಲ್ಲಿ ಮುನ್ನಡೆ ಸಾಧಿಸಿವೆ.
ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಸಿಪಿಎಂನ ಮೇಯರ್ ಕೆ. ಶ್ರೀಕುಮಾರ್ ಅವರು ಬಿಜೆಪಿ ಅಭ್ಯರ್ಥಿ ಎದುರು ಕರಿಕ್ಕಕಮ್ ವಾರ್ಡ್‌ನಲ್ಲಿ ಸೋಲು ಅನುಭವಿಸಿರುವುದು ಸಿಪಿಎಂಗೆ ಆಘಾತ ಉಂಟುಮಾಡಿದೆ. ಸ್ಥಳೀಯ ಜನಪ್ರಿಯ ನಾಯಕರಾಗಿದ್ದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಈ ಬಾರಿಯ ಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಗೆದ್ದಿದ್ದರೂ ಅವರು ಎರಡನೆಯ ಅವಧಿಗೆ ಮೇಯರ್ ಆಗುತ್ತಿರಲಿಲ್ಲ.
2015ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 34 ಸೀಟುಗಳಲ್ಲಿ ಗೆಲುವು ಕಂಡಿತ್ತು. ಈ ಬಾರಿ 30 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಎಲ್‌ಡಿಎಫ್ 50 ಸೀಟುಗಳೊಂದಿಗೆ ಮುನ್ನಡೆ ಪಡೆದಿದೆ. ಯುಡಿಎಫ್ 9 ಸೀಟುಗಳಲ್ಲಿ ಮುನ್ನಡೆ ಹೊಂದಿದೆ.


