HEALTH TIPS

ದೊಂಪತ್ತಡ್ಕ ಕಾನೂನುಬಾಹಿರ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ಕೈಗೆತ್ತಿಕ್ಕೊಳ್ಳಿ ; ಯುವಜನ ಸಂಘಟನೆ, ರಾಷ್ಟ್ರೀಯ ಪಕ್ಷಗಳಿಗೆ ಕರೆ ನೀಡಿದ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ. ಟಿ. ವಿ. ರಾಜೇಂದ್ರನ್

               

       ಮುಳ್ಳೇರಿಯ: ದೊಂಪತ್ತಡ್ಕ ಕಾನೂನುಬಾಹಿರ ಕಗ್ಗಲ್ಲು ಗಣಿಗಾರಿಕೆಯ ವಿರುದ್ಧ ನಡೆಯುತ್ತಿರುವ ಈ ಪ್ರತಿಭಟನೆಗೆ ಯುವ ಜನ ಸಂಘಟನೆಗಳು, ರಾಷ್ಟ್ರೀಯ ಪಕ್ಷಗಳು ಬೆಂಬಲ ನೀಡಬೇಕಿದ್ದು, ಈ ಹೋರಾಟವನ್ನು ಕೈಗೆತ್ತಿಕ್ಕೊಂಡು ಅನ್ಯಾಯವನ್ನು ಮಟ್ಟಹಾಕಿ ನ್ಯಾಯದ ಗೆಲುವಿಗೆ ಶ್ರಮಿಸಬೇಕು ಎಂದು ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ. ಟಿ. ವಿ. ರಾಜೇಂದ್ರನ್ ಕರೆ ನೀಡಿದರು. 

       ಬೆಳ್ಳೂರು ಪಂಚಾಯತಿ ವ್ಯಾಪ್ತಿಯ ಪನೆಯಾಲ ಸಮೀಪದ ಅಪಾಯಕಾರಿ ಕಾನೂನುಬಾಹಿರ ದೊಂಪತ್ತಡ್ಕ ಕಗ್ಗಲ್ಲು ಗಣಿಗಾರಿಕೆಯ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

         ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿಯೋಜಿಸಿದ್ದ ಕಮಿಷನರ್ ಕ್ವಾರೆಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಸಲ್ಲಿಸಿದ್ದ ವರದಿ ಹಾಗೂ ವಾದ ಪ್ರತಿವಾದ ಆಲಿಸಿ, ತೀವ್ರತೆ ಅಧಿಕವಿರುವ ಸ್ಪೋಟ ಮಾಡಬಾರದು, ಘನ ಯಂತ್ರೋಪಕರಣಗಳನ್ನು ಬಳಸಬಾರದು ಎಂದು ತಡೆಯಾಜ್ಞೆ ನೀಡಿತ್ತು, ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿ ಕೆಲ ನ್ಯಾಯಾಲಯದ ತೀರ್ಪನ್ನು ಅಂಗೀಕರಿಸಿತ್ತಾದರೂ ಈಗಲೂ ಕೂಡ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಕಾನೂನು ಪಾಲಕರೇ ಕಾನೂನು ಉಲ್ಲಂಘನೆಗೆ ಸಾತ್ ನೀಡುತ್ತಿದ್ದು, ಹಣಬಲದ ಮುಂದೆ ನ್ಯಾಯಾಲಯದ ಆಜ್ಞೆಯೂ ಕೂಡ ತೃಣ ಸಮಾನವಾಗಿದೆ.

      ಜೊತೆಗೆ ಪಾಸ್ ಇಲ್ಲದೆ ದಿನಂಪ್ರತಿ ಅಧಿಕಾರಿಗಳ ಕಣ್ಮುಂದೆಯೇ ತೆರಿಗೆ ವಂಚಿಸಿ ಕೋಟ್ಯಂತರ ಮೊತ್ತದ ಕಗ್ಗಲ್ಲು ಸಾಗಿಸುತ್ತಿದ್ದು, ಕೊರೆಯಲ್ಲೇ ನಿಕ್ಷೇಪಿಸಬೇಕಾದ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಇದ್ಯಾವುದರ ಗೊಡವೆಯೇ ಇಲ್ಲದ ಅಧಿಕಾರಿಗಳು ಕಂಡು ಕಾಣದಂತೆ ನಟಿಸುತ್ತಿದ್ದು, ಇಂತಹ ಇಬ್ಬಾಗಿಲ ನೀತಿಯ ವಿರುದ್ಧ ಜನತೆ ಒಗ್ಗೂಡಬೇಕಿದ್ದು, ತೀವ್ರ ಪ್ರತಿಭಟನೆಗಳು ಸಂಘಟನೆಗಳ ಸಹಯೋಗದಲ್ಲಿ ನಡೆಯಬೇಕಿದೆ ಎಂದರು.

        ವಿಜ್ಞಾನ ಸಾಹಿತ್ಯ ಪರಿಷತ್ತಿನ ಪರಿಸರ ವಿಭಾಗದ ಸಂಚಾಲಕ ಪ್ರೊ. ಎಂ. ಗೋಪಾಲನ್ ಮಾತನಾಡಿ, ಹಿಂದೆ 200 ಅಡಿ ಕೊಳವೆಬಾವಿ ಕೊರೆದರೆ ನೀರು ಸಿಗುವ ಸ್ಥಳದಲ್ಲಿ ಇಂದು 500 ಅಡಿ ಕೊರೆದರೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಈ ಕಗ್ಗಲ್ಲು ಕ್ವಾರೆಯೇ ಎಂಬುದರಲ್ಲಿ ಎರಡು ಮಾತಿಲ್ಲ. ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಇಂತಹ ಖನನದಿಂದಾಗಿ ನೀರಿನ ಸಮಸ್ಯೆ ಮಾತ್ರವಲ್ಲ, ಪರಿಸರದ ನಾಶ, ಸಮೀಪವಾಸಿಗಳಿಗೆ ಆರೋಗ್ಯ ಸಮಸ್ಯೆ, ಜಲ, ವಾಯು, ಮಣ್ಣು ಮಾಲಿನ್ಯ ತಲೆದೋರುತ್ತದೆ ಹಾಗೂ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇವುಗಳಿಂದ ಹೊರಬರಲು ಒಗ್ಗಟ್ಟೊಂದೇ ಕೀಲಿ ಕೈ ಎಂದರು. 

           ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರ, ಪರಿಸರ ವಾದಿ, ವೈದ್ಯ ಡಾ. ಮೋಹನ್ ಕುಮಾರ್ ವೈ. ಎಸ್. ಮಾತನಾಡಿ, ಮಾನವನಿಗೆ ಪ್ರಾಕೃತಿಕ ಸಂಪನ್ಮೂಲಗಳು ಅತ್ಯಂತ ಅವಶ್ಯಕವಾದವುಗಳು ಎಂಬುವುದರಲ್ಲಿ ಸಂಶಯವಿಲ್ಲ. ಆದರೆ ಅವುಗಳ ಖನನದಿಂದ ಪ್ರಕೃತಿಗೆ ಆಗುವ ನಾಶ, ಸಮೀಪವಾಸಿಗಳು ಅನುಭವಿಸುವ ಸಮಸ್ಯೆ ಮುಂತಾದವುಗಳ ಕುರಿತು ತುಲನೆ ಮಾಡಿ ತೀರ್ಮಾನ ಮಾಡಿಕೊಳ್ಳುವುದು ಅನಿವಾರ್ಯ ಎಂದರು.

       ಗ್ರಾ.ಪಂ. ಸದಸ್ಯೆ ಸುಜಾತ ಎಂ.ರೈ., ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ವಿನಯನ್ ವಿ.ಕೆ., ದೊಂಪತ್ತಡ್ಕ ಕ್ವಾರಿ ವಿರುದ್ಧ ಸಮರ ಸಮಿತಿ ಅಧ್ಯಕ್ಷ ಅಲಿಕುಂಞ  ಡಿ, ಕಾರ್ಯದರ್ಶಿ ಸರ್ವೇಶ್ ರೈ ಕಳುವಾಜೆ ಉಪಸ್ಥಿತರಿದ್ದರು. 

            ಪ್ರದೀಪ್ ಸ್ವಾಗತಿಸಿ ಗೋಪಾಲಕೃಷ್ಣ ವಂದಿಸಿದರು. ಪ್ರೀತಮ್ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries