ನವದೆಹಲಿ: ಎರಡು ಬಾರಿ ರೂಪಾಂತರಗೊಂಡಿರುವ ಕೊರೊನಾ ವೈರಸ್‌ನ ತಳಿಗಳು ಮಹಾರಾಷ್ಡ್ರದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ದೃಢಪಡಿಸಿದೆ.
ಎರಡು ಬಾರಿ ರೂಪಾಂತರಗೊಂಡಿರುವ ಕಾರಣ, ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕಶಕ್ತಿಗೂ ಈ ವೈರಸ್ ಮಣಿಯುವುದಿಲ್ಲ. ಅಲ್ಲದೇ, ರೋಗನಿರೋಧಕ ಶಕ್ತಿಯು ಹೆಚ್ಚು ನಿಷ್ಕ್ರಿಯಗೊಳ್ಳಲು ಸಹ ರೂಪಾಂತರಿತ ವೈರಸ್ ಕಾರಣವಾಗುವುದು ಎಂದೂ ಸಚಿವಾಲಯ ವಿಶ್ಲೇಷಿಸಿದೆ.
ಆದರೆ, ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಲು, ಎರಡು ಬಾರಿ ರೂಪಾಂತರಗೊಂಡಿರುವ ಈ ವೈರಸ್ ಕಾರಣ ಎಂದು ಸಚಿವಾಲಯ ಹೇಳಿಲ್ಲ. ಇಂಥ ನಿರ್ಧಾರಕ್ಕೆ ಬರಲು ಸಾಕಷ್ಟು ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ಹೇಳಿದೆ.
'ಮಹಾರಾಷ್ಟ್ರದಲ್ಲಿ ಈಗ ವರದಿಯಾಗಿರುವ ಪ್ರಕರಣಗಳ ಪೈಕಿ, ವಿಶ್ಲೇಷಣೆಗೆ ಒಳಪಡಿಸಿರುವ ಶೇ 15-20ರಷ್ಟು ಮಾದರಿಗಳಲ್ಲಿ ಮಾತ್ರ ಎರಡು ಬಾರಿ ರೂಪಾಂತರಿತ ವೈರಸ್ ಕಂಡು ಬಂದಿದೆ' ಎಂದು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ನಿರ್ದೇಶಕ ಸುಜಿತ್ ಸಿಂಗ್ ಹೇಳಿದರು.
'ಇಷ್ಟು ಅಲ್ಪ ಪ‍್ರಮಾಣದ ಮಾದರಿ ವಿಶ್ಲೇಷಣೆಯನ್ನು ಆಧಾರವಾಗಿಟ್ಟುಕೊಂಡು, ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ರೂಪಾಂತರಿತ ವೈರಸ್ ಕಾರಣ ಎಂದು ಹೇಳಲಾಗದು' ಎಂದು ಹೇಳಿದರು.
ನಾಗಪುರದ ಎಂಟು ವಾರ್ಡ್‌ಗಳಿಗೆ ಸಂಬಂಧಿಸಿದ ಮಾದರಿಗಳ ಪೈಕಿ ಶೇ 20 ಮಾದರಿಗಳಲ್ಲಿ ಈ ರೂಪಾಂತರಿತ ವೈರಸ್ ಪತ್ತೆಯಾಗಿದೆ ಎಂದು ಸಚಿವಾಲಯ ಹೇಳಿದೆ.


