ಕೊಚ್ಚಿ: ಕೇಂದ್ರ ಸರ್ಕಾರದ ಬಹುತೇಕ ಜನಸ್ನೇಹಿ ಅಭಿಯಾನಗಳು ಕೇರಳಿಗರನ್ನು ತಲುಪಿಲ್ಲ, ರಾಜ್ಯ ಸರ್ಕಾರದ ಅಸಹಕಾರವೇ ಇದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಅವರು ಕೇರಳ ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡಲು ಆಗಮಿಸಿದ್ದ ವೇಳೆ ತ್ರಿಪಿನುತುರಾದಲ್ಲಿ ಜೆಟಿಪಿಎಸಿಯ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದೊಂದಿಗೆ ಈಗಿನ ರಾಜ್ಯ ಸರ್ಕಾರದ ಅಸಹಾರದಿಂದ ಕೇರಳದ ಜನತೆ ಇನ್ನಿಲ್ಲದಂತೆ ತೊಂದರೆ ಅನುಭವಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೂಡ ಇದೇ ಪರಿಸ್ಥಿತಿ ಎಂದು ಹೇಳಿದರು.
ಶಬರಿಮಲೆಯಲ್ಲಿ ಸಂಪ್ರದಾಯಗಳನ್ನು ಕಾಪಾಡಲು ಕಾನೂನನ್ನು ತರಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ರಾಜ್ಯ ಸರ್ಕಾರದ ನಕಲಿ ಮಹಿಳಾ ಸಬಲೀಕರಣ ಮನೋಭಾವವಾಗಿದ್ದು, ಇದು ಸಮಸ್ಯೆಗಳಿಗೆ ಕಾರಣವಾಗಿದೆ. ಧಾರ್ಮಿಕ ನಂಬಿಕೆಗಳನ್ನು ನಾಶಮಾಡುವ ಮೂಲಕವೇ ಮಹಿಳಾ ಸಬಲೀಕರಣವನ್ನು ಜಾರಿಗೆ ತರಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರ ತಪ್ಪು. ಬದಲಾಗಿ ಉನ್ನತ ಶಿಕ್ಷಣ, ಆರ್ಥಿಕ ಸ್ಥಿರತೆ, ವಿಧಾನಸಭೆಯಲ್ಲಿ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಇದನ್ನು ಕೈಗೊಳ್ಳಬೇಕು .ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 17 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದರು.
ಲವ್ ಜಿಹಾದ್ ಬಗ್ಗೆ ಕೇಳಿದಾಗ ಇದು ಹಿಂದು-ಮುಸ್ಲಿಂ ವಿವಾದವಲ್ಲ. ಮಹಿಳೆಯರ ವಿಮೋಚನೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲುಂಟಾಗಬಹುದು ಎಂಬ ಭಯದಿಂದ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಿದರು ಎಂದರು.

