ಕಾಸರಗೋಡು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಬಿ.ಎಸ್.ಪಿ. ಅಭ್ಯರ್ಥಿ ನಾಪತ್ತೆಯಾಗಿರುವರೆಂಬ ವರದಿಯ ಹಿನ್ನೆಲೆಯಲ್ಲಿ ಸ್ವತಃ ಕೆ.ಸುಂದರ ಅವರೇ ವಿವಾದಗಳಿಗೆ ವಿರಾಮ ಹಾಡಲು ಬಹಿರಂಗ ಹೇಳಿಕೆ ನೀಡಿದ್ದಾರೆ. ಮಂಜೇಶ್ವರದಲ್ಲಿ ಕೆ ಸುರೇಂದ್ರನ್ ವಿರುದ್ಧ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಕೆ ಸುಂದರ ನಿನ್ನೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಸುಂದರ ಅವರನ್ನು ಬಿಜೆಪಿ ಅಪಹರಿಸಿ ಬೆದರಿಕೆ ಹಾಕಿದೆ ಎಂಬ ಆರೋಪ ಬಿಎಸ್ಪಿ ಕಟುವಾಗಿ ಟೀಕಿಸಿತ್ತು. ಬಳಿಕ ಸುಂದರ ಅವರು ಬಿಜೆಪಿ ಮುಖಂಡರ ಜೊತೆ ಮಾಧ್ಯಮಗಳೆದುರು ಕಾಣಿಸಿಕೊಂಡು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಇಂದು ನಾಮಪತ್ರವನ್ನು ಹಿಂತೆಗೆದಿದ್ದು ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿದರು. ಶಬರಿಮಲೆ ಹೋರಾಟದ ನಾಯಕ ಕೆ.ಸುರೇಂದ್ರನ್ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
2016 ರಲ್ಲಿ ಕೆ ಸುರೇಂದ್ರನ್ ವಿರುದ್ಧ ಸ್ಪರ್ಧಿಸಿದ ಸುಂದರ 467 ಮತಗಳನ್ನು ಪಡೆದಿದ್ದರು. ಕೆ.ಸುರೇಂದ್ರನ್ ಕೇವಲ 89 ಮತಗಳ ಅಂತರದಿಂದ ಮುಸ್ಲಿಂಲೀಗ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಸಾಕ್ ವಿರುದ್ದ ಪರಾಭವಗೊಂಡಿದ್ದರು.
ಹೆಸರಿನಲ್ಲಿನ ಹೋಲಿಕೆ ಸಮಸ್ಯೆಯಿಂದ ಕೆ.ಸುಂದರ ವೈಯುಕ್ತಿಕವಾಗಿ ಸುರೇಂದ್ರನ್ ಅವರಿಗೆ ಚಲಾವಣೆಯಾಗಬೇಕಾದ ಮತಗಳನ್ನು ಕಸಿದುಕೊಂಡರು ಎಂದು ವಿಶ್ಲೇಶಿಸಲಾಗಿತ್ತು. ಕೆ.ಸುಂದರ ಅಂದು 467 ಮತಗಳನ್ನು ಪಡೆದಿದ್ದರು. ಸುಂದರ ಐಸ್ ಕ್ರೀಮ್ ಚಿಹ್ನೆಯಲ್ಲಿ ಸ್ಪರ್ಧಿಸಿದ್ದರು. ಹೆಸರು ಮತ್ತು ಚಿಹ್ನೆಯಲ್ಲಿನ ಸಾಮ್ಯತೆಯು ಈ ಬಾರಿ ಸುರೇಂದ್ರನ್ ಅವರನ್ನು ಮತ್ತೆ ಸಂಕಷ್ಟಕ್ಕೆ ತಳ್ಳಲಿದೆ ಎಂಬ ಊಹೆಯ ಹಿನ್ನೆಲೆಯಲ್ಲಿ ಭಾರೀ ಗೊಂದಲಮಯ ಚರ್ಚೆಗಳ ಮಧ್ಯೆ ಕೆ ಸುಂದರ ಅವರು ನಾಮಪತ್ರ ಹಿಂತೆಗೆದುಕೊಂಡಿರುವುದು ಬಿಜೆಪಿ ಪಾಳಯದಲ್ಲಿ ನೆಮ್ಮದಿಗೆ ಕಾರಣವಾಗಿದೆ.


