HEALTH TIPS

ರೈಲ್ವೆಯಲ್ಲಿ ಮಹಿಳೆಯರ ಸುರಕ್ಷತೆಗೆ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದ ಕೇಂದ್ರ

                         ಮಾರ್ಗದರ್ಶಿ ಸೂತ್ರಗಳ ಮುಖ್ಯಾಂಶಗಳು.

1.ರೈಲ್ವೆ ನಿಲ್ದಾಣದ ವಾಹನ ಪಾರ್ಕಿಂಗ್ ಪ್ರದೇಶ, ಪ್ಲಾಟ್‌ಫಾರಂನ ಕೊನೆಯ ಭಾಗ, ರೈಲ್ವೆ ಯಾರ್ಡ್ ಮತ್ತಿತರ ಸೂಕ್ಷ್ಮಪ್ರದೇಶಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ

2.ನಿರೀಕ್ಷಣಾ ಕೊಠಡಿಗಳಿಗೆ ಕಣ್ಗಾವಲು

3.ಯಾರ್ಡ್‌ಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ತಡೆ

4. ರೈಲ್ವೆ ಪರಿಸರದಲ್ಲಿ ನಡೆಯುವ ಅಪರಾಧ ಘಟನೆಗಳ ಬಗ್ಗೆ ಕೂಡಲೇ ಮಾಹಿತಿ ನೀಡಲು ಹೊರೆಯಾಳುಗಳು, ಮಾರಾಟಗಾರರನ್ನು ಉತ್ತೇಜಿಸುವುದು

5. ಮಹಿಳೆಯರು, ಮಕ್ಕಳ ಸುರಕ್ಷತೆ ಬಗ್ಗೆ ರೈಲ್ವೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವುದು.

ಹೊಸದಿಲ್ಲಿ, ಮಾ.21: ರೈಲುಗಳು ಹಾಗೂ ರೈಲ್ವೆ ಆವರಣಗಳಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುವುದನ್ನು ತಡೆಗಟ್ಟಲು ರೈಲ್ವೆ ಸಚಿವಾಲಯವು ಸೋಮವಾರ ನೂತನ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ. ಭಾರತೀಯ ರೈಲ್ವೆಯಲ್ಲಿ ದಿನನಿತ್ಯವೂ ಪ್ರಯಾಣಿಸುವ 2.3 ಕೋಟಿ ಪ್ರಯಾಣಿಕರ ಪೈಕಿ ಶೇ.20ರಷ್ಟಿರುವ ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುತ್ತಿರುವುದು ಪ್ರಮುಖ ಆತಂಕದ ವಿಷಯವೆಂದು ಸಚಿವಾಲಯ ತಿಳಿಸಿದೆ.

         ರೈಲ್ವೆ ಸಚಿವಾಲಯ ಮಾರ್ಚ್ 20ರಂದು ಪ್ರಕಟಿಸಿದ ಆದೇಶವೊಂದರಲ್ಲಿ ರೈಲುಗಳು ಹಾಗೂ ರೈಲ್ವೆ ಆವರಣದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುವುದನ್ನು ತಡೆಯಲು ಕಣ್ಗಾವಲು ಹಾಗೂ ಜಾಗೃತಿ ಮೂಡಿಸುವಿಕೆ ಸೇರಿದಂತೆ ಹಲವಾರು ಕ್ರಮಗಳನ್ನು ಪಟ್ಟಿ ಮಾಡಿತ್ತು.

      ರೈಲ್ವೆ ನಿಲ್ದಾಣದ ವಾಹನ ಪಾರ್ಕಿಂಗ್ ಪ್ರದೇಶ, ಪ್ಲಾಟ್‌ಫಾರಂ ಕೊನೆ ಭಾಗ, ರೈಲ್ವೆ ಯಾರ್ಡ್‌ಗಳಂತಹ ಸೂಕ್ಷ್ಮಪ್ರದೇಶಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಖಾತರಿಪಡಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ರೈಲ್ವೆ ಆವರಣದಲ್ಲಿರುವ ಪರಿತ್ಯಕ್ತ ಕಟ್ಟಡಗಳನ್ನು ಇಂಜಿನಿಯರಿಂಗ್ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ ನಾಶಪಡಿಸಬೇಕೆಂದು ಸಚಿವಾಲಯ ತಿಳಿಸಿದೆ.

        ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಮತ್ತು ಪ್ರಯಾಣಿಕರ ಸಂಖ್ಯೆಯ ವಿರಳವಾಗಿರುವ ಸಂದರ್ಭಗಳಲ್ಲಿ, ಸೂಕ್ತ ಪರಿಶೀಲನೆಯ ನಂತರವೇ ವ್ಯಕ್ತಿಗಳಿಗೆ ನಿರೀಕ್ಷಣಾ ಕೊಠಡಿಗಳು (ವೇಟಿಂಗ್ ರೂಂ)ಗಳನ್ನು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ. ಕರ್ತವ್ಯದಲ್ಲಿರುವ ಅಧಿಕಾರಿಗಳು ಅಪರ ವೇಳೆಯಲ್ಲಿ ಅವುಗಳ ತಪಾಸಣೆ ನಡೆಸಬೇಕು ಎಂದು ಅದು ಸೂಚಿಸಿದೆ.

        ಬೋಗಿಗಳನ್ನು ನಿಲ್ಲಿಸಲಾಗಿರುವ ಯಾರ್ಡ್‌ಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ತಡೆಯುವಂತೆ ಮತ್ತು ಬೋಗಿಗಳಿಗೆ ಬೀಗಹಾಕುವಂತೆ ಸಚಿವಾಲಯವು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದೆ. ಬಹುತೇಕ ಅಪರಾಧ ಪ್ರಕರಣಗಳು ಶೌಚಾಲಯದ ಸಮೀಪದಲ್ಲೇ ವರದಿಯಾಗುತ್ತಿರುವುದರಿಂದ ಆ ಸ್ಥಳಗಳಲ್ಲಿ ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕೆಂದು ಸಚಿವಾಲಯ ಹೇಳಿದೆ.

          ರೈಲ್ವೆ ಪರಿಸರದಲ್ಲಿ ಯಾವುದೇ ಅಪರಾಧ ಪ್ರಕರಣಗಳ ಗಮನಕ್ಕೆ ಬಂದರೂ ಆ ಬಗ್ಗೆ ಕೂಡಲೇ ಪೊಲೀಸರು, ರೈಲ್ವೆ ರಕ್ಷಣಾ ಪಡೆ ಅಥವಾ ಸ್ಟೇಶನ್ ಮಾಸ್ಟರ್‌ಗೆ ವರದಿ ಮಾಡುವಂತೆ ಸರಕುಗಳ ತಪಾಸಣೆ ನಡೆಸುವ ಸಿಬ್ಬಂದಿ, ಹೊರೆಯಾಳುಗಳು, ಕಾಲ್ನಡಿಗೆಯ ಮಾರಾಟಗಾರರು, ಅಂಗಡಿ ಮಾಲಕರನ್ನು ಉತ್ತೇಜಿಸಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಲಾಗಿದೆ.

         ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕುರಿತಾದ ತಮ್ಮ ಕರ್ತವ್ಯದ ಬಗ್ಗೆ ಎಲ್ಲಾ ಇಲಾಖೆಗಳ ರೈಲ್ವೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಬೇಕು ಈ ಬಗ್ಗೆ ಅವರಿಗೆ ತರಬೇತಿ ನೀಡಲು ವಿವಿಧ ತರಬೇತಿ ಸಂಸ್ಥೆಗಳನ್ನು ಬಳಸಿಕೊಳ್ಳಬೇಕೆಂದು ಮಾರ್ಗಸೂಚಿಯು ಶಿಫಾರಸು ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries