HEALTH TIPS

ಲಂಕೇಶರ ಕಣ್ಣಲ್ಲಿ ರಾಜಕೀಯ-ರಾಜಕಾರಣ

          ಲಂಕೇಶ್ ರಾಜಕೀಯದ ಬಗ್ಗೆ ದಿಟ್ಟ ನಿಲುವುಗಳನ್ನು ಹೊಂದಿದ್ದರು. ರಾಜಕಾರಣಿ ಸಾಮಾನ್ಯ ಮನುಷ್ಯನಿಗಿಂತ ಬೇರೆ ಅಲ್ಲ. ಬೇರೆ ಎಂದು ತಿಳಿದರೆ ಅವನು ಮನುಷ್ಯನಾಗಿ ಉಳಿಯುವುದಿಲ್ಲ. 


ಸಮಾಜವಾದಿ ಸಿದ್ಧಾಂತ ಹಾಗೂ ಯುರೋಪ್ ಪ್ರಣೀತ ಉದಾರವಾದಿ ನಿಲುವು ಅವರ ವಿಚಾರಗಳಲ್ಲಿ ಹಾಸು ಹೊಕ್ಕಾಗಿದ್ದವು.
 ರಾಮ ಮನೋಹರ ಲೋಹಿಯಾ ದಟ್ಟ ಪ್ರಭಾವ ಬೀರಿದ್ದರು. ಜಯಪ್ರಕಾಶ ನಾರಾಯಣ ನೈತಿಕ ಶಕ್ತಿಯಾಗಿ ಕಂಡಿದ್ದರು. ಆರ್ಥರ್ ಕೊಯೆಸ್ಟಲರ್ ಕೃತಿ 'ಡಾರ್ಕನೆಸ್ ಆಯಟ್ ನೂನ್' ಬಹಳವಾಗಿ ಪೀಡಿಸಿತ್ತು. ಸರ್ವಾಧಿಕಾರಿಗಳ ಮನೋಭೂಮಿಕೆ ಅನಾವರಣಗೊಂಡಿತ್ತು. ರಾಜಕೀಯದ ಭ್ರಷ್ಟತೆ ಅವರನ್ನು ಕ್ಷೋಭೆಗೊಳಿಸಿತ್ತು. ಆಡಳಿತ ಮಾಡುವ ರಾಜಕಾರಣಿಗಳು ಹಾಗೂ ನೌಕರಶಾಹಿಯ ಸುಲಿಗೆ ಕೆರಳಿಸಿತ್ತು. ಹೆಚ್ಚು ಹೆಚ್ಚು ಅಧಿಕಾರ ಹೆಚ್ಚು ಹೆಚ್ಚು ಸುಲಿಗೆ ಎನ್ನುವುದು ಅವರ ತಿಳುವಳಿಕೆಯಾಗಿತ್ತು. ಜನರು ಹರಕೆಯ ಕುರಿಗಳೆನ್ನುವುದೂ ಗೊತ್ತಿತ್ತು. ಬದುಕಿನುದ್ದಕ್ಕೂ ಜನರಿಗಾಗಿ ಹೋರಾಟ ಮಾಡಿದರು. ಸಂಘರ್ಷದ ತಮ್ಮ ತೆರೆದ ಕತ್ತಿಯನ್ನು ಕೊನೆಯವರೆಗೂ ಕೆಳಗೆ ಇಡಲೇ ಇಲ್ಲ. ಸರಕಾರ ಎನ್ನುವುದು ಸಾಮಾನ್ಯ ಜನರ, ಯುವಕ-ಯುವತಿಯರ, ಎಲ್ಲ ಸಮುದಾಯಗಳ ಆಕಾಂಕ್ಷೆ, ಅಪೇಕ್ಷೆಗಳಿಗೆ ಮಿಡಿಯ ಬೇಕಾಗುತ್ತದೆ; ಈ ಅರಿವು ಇರದೇ ಹೋದಲ್ಲಿ ಸರಕಾರ ಎನ್ನುವುದು ಭ್ರಷ್ಟರ ಕಸಾಯಿಖಾನೆಯಾಗುತ್ತದೆ; ಅದು ಕುರುಡು ಕಿವುಡರ ಸಂಸ್ಥೆಯಾಗುತ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು.

           ನಾಡಿನ ಯುವ ಜನತೆಗೆ ಸರಕಾರದಿಂದ ಹಲವಾರು ನಿರೀಕ್ಷೆಗಳಿರುತ್ತವೆ. ಅವುಗಳನ್ನು ಪೂರೈಸುವುದು ಸರಕಾರದ ಕರ್ತವ್ಯವಾಗಿದೆ. ಸರಕಾರ ಮನುಷ್ಯರ ಜೊತೆ ಪರಿಸರವನ್ನೂ ಕಾಪಾಡಬೇಕಾಗುತ್ತದೆ. ಸಣ್ಣ ಸಣ್ಣ ಜೀವವೂ ಅಪಾಯವಿಲ್ಲದೆ ಈ ಭೂಮಿಯ ಮೇಲೆ ಬದುಕಬೇಕಾಗಿದೆ. ಪೂರಕವಾಗಿ ಬೆಳೆಯಬೇಕಾಗಿದೆ. ಪ್ರಜೆ ಎಂದರೆ ಬರಿ ಪ್ರಜೆ ಅಲ್ಲ; ಪ್ರಜೆಯ ಸುತ್ತಲೂ ಇರುವ ಪ್ರಕೃತಿ ಹಾಗೂ ಪರಿಕರಗಳು. ಒಂದನ್ನು ಲೂಟಿ ಮಾಡಿ ಮತ್ತೊಂದನ್ನು ಉಳಿಸಲಿಕ್ಕಾಗುವುದಿಲ್ಲ. ಒಂದು ಮತ್ತೊಂದರ ಮೇಲೆ ಅವಲಂಬಿತವಾಗಿದೆ. ಒಂದು ಮತ್ತೊಂದರ ಜೊತೆ ಸಾಮರಸ್ಯ ಸಾಧಿಸಿ ಬದುಕಬೇಕಾಗಿದೆ. ಅಂತಹ ಮಿಡಿತದಲ್ಲಿಯೇ ನಮ್ಮೆಲ್ಲರ ಉದ್ಧಾರವಿದೆ. ಹೀಗಾಗಿ ಚಿಗುರುವ ಗರಿಕೆಯು ಅಧಿಕಾರದ ಮೆಟ್ಟಲು ಹತ್ತಿ ಇಳಿಯುವ ರಾಜಕಾರಣಿಯನ್ನು ಸದಾ ನೋಡುತ್ತದೆ. ಆ ಗರಿಕೆಗೂ ಬದುಕಿನಲ್ಲಿ ಪಾಲಿದೆ. ಅದರ ಪೋಷಣೆಯೂ ಎಲ್ಲರ ಕರ್ತವ್ಯವಾಗಿದೆ. ಯುವಕ ಯುವತಿಯರು ದೇಶದ ಕನಸುಗಳನ್ನು ಹೊತ್ತು ಸಾಗಿಸುವ ಸಾಹಸ ಪಡೆಯಾಗಿದೆ. ಅವರ ಕನಸು, ಶ್ರಮ ಹಾಗೂ ಫಲಿತಾಂಶದಲ್ಲಿ ದೇಶದ ಭವಿಷ್ಯವಿದೆ. ಅವರ ಕಾತುರಗಳನ್ನು ಕಿವಿಗೊಟ್ಟು ಕೇಳಬೇಕಾಗುತ್ತದೆ. ಕೇಳದೇ ಹೋದಲ್ಲಿ ಅದು ಮತ್ತೊಂದು ಬಂಜರು ಭೂಮಿಯಾಗುತ್ತದೆ.

ಕಮ್ಯುನಿಸ್ಟ್ ಹಾಗೂ ಸರ್ವಾಧಿಕಾರಿ ಸರಕಾರಗಳ ಬಗ್ಗೆ ಲಂಕೇಶ್ ನಿಲುವು ಸ್ಪಷ್ಟವಾಗಿತ್ತು. ಅವು ಜನರನ್ನು ಕಟ್ಟಿಗೆಯ ಸರಕುಗಳನ್ನಾಗಿ ಪರಿವರ್ತಿಸುತ್ತವೆ. ಅವು ಜನರ ಜೀವ ಚೈತನ್ಯವನ್ನೇ ಕುಡಿದು ನುಂಗಿ ಬಿಡುತ್ತವೆ. ಅವುಗಳಿಂದ ಮೂಲಭೂತ ಸ್ವಾತಂತ್ರ್ಯದ ಹರಣವಾಗುತ್ತದೆ. ಅಂತಹ ರಾಷ್ಟ್ರಗಳಲ್ಲಿ ಬದುಕುವುದು ಸಾಯುವುದು ಸಮವಾಗಿರುತ್ತದೆ. ಅಂತಹ ಶೋಷಣೆ ಹೃದಯ ಬಿರಿಯುವಂತಿರುತ್ತದೆ. ಸರ್ವಾಧಿಕಾರಿ, ಪೊಲಿಟ್ ಬ್ಯೂರೋ ಹಾಗೂ ಸೈನ್ಯ, ಮಾರಕ ಶಸ್ತ್ರಗಳಂತೆ ಕಾರ್ಯನಿರ್ವಹಿಸುತ್ತವೆ. ಅಲ್ಲಿ ಬೂಟಿನ ಶಬ್ದ ಕೇಳುತ್ತದೆ. ಜನರ ಆತ್ಮ ನಾಶವಾಗುತ್ತದೆ.

ಪ್ರತಿಯೊಬ್ಬ ಸರ್ವಾಧಿಕಾರಿಗೆ
ಜನರು
ಕೇವಲ ಮಂಚದ ಕಾಲುಗಳು (ನೀಲು 1-177)

ಇತಿಹಾಸ ತೋರುವಂತೆ ರಶ್ಯದ ಕಮ್ಯುನಿಸ್ಟ್ ಸರ್ವಾಧಿಕಾರದ ದಮನ ನೀತಿಯಿಂದ ಹಲವಾರು ಪೀಳಿಗೆಗಳು ನಾಶವಾದವು. ಅದನ್ನು ನೋಡಿದ ಯೂರೋಪ್ ಬೆಚ್ಚಿಬಿತ್ತು. ಸಾಮಾನ್ಯ ಜನರ ಹೆಸರಿನಲ್ಲಿ ಅಧಿಕಾರ ಹಿಡಿದ ಸರಕಾರ ಹಿಂಸೆಯ ಕಾರ್ಖಾನೆಯಾಗಿತ್ತು. ಸ್ವಾತಂತ್ರ್ಯದ ಕಣ್ಣುಗಳನ್ನು ಕಿತ್ತುಕೊಂಡಿತ್ತು. ಸೈನ್ಯ ಹಾಗೂ ನೌಕರಶಾಹಿ ಗಹಗಹಿಸಿ ನಗುತ್ತಿತ್ತು. ಎಲ್ಲವೂ ನನ್ನ ಕಾಲ ಕೆಳಗೆ ಎನ್ನುವಂತೆ ನಿರಂಕುಶವಾಗಿ ವರ್ತಿಸಿತ್ತು. ಸ್ಟಾಲಿನ್ ಆಡಳಿತದಲ್ಲಿ ಈ ಕರಾಳ ವಾತಾವರಣ ಸೃಷ್ಟಿಯಾಗಿತ್ತು. ಬಡವರು ಕೂಲಿಕಾರರ ಹೆಸರಿನಲ್ಲಿ ಎಂತಹ ರಾಕ್ಷಸರು ಹುಟ್ಟಬಹುದೆನ್ನುವುದಕ್ಕೆ ರಶ್ಯ ಸಾಕ್ಷಿಯಾಗಿತ್ತು. ಆ ಭ್ರಮನಿರಸನ ಮುಂದೆ ಬಂದ ಎಲ್ಲ ಯೂರೋಪ್ ಬರಹಗಾರರ ಸಂವೇದನೆಗಳ ಮೇಲೆ ಪರಿಣಾಮ ಬೀರಿತು. ಆ ವರ್ತಮಾನಗಳು ಲಂಕೇಶ್‌ರನ್ನು ಬಲವಾಗಿ ಕ್ಷೋಭೆಗೊಳಿಸಿದ್ದವು.

ಪ್ರಜಾಪ್ರಭುತ್ವ ಸರಕಾರಗಳ ಬಗ್ಗೆಯೂ ನಿತ್ಯದ ಎಚ್ಚರ ಅವಶ್ಯಕವೆನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಅಧಿಕಾರ ಭ್ರಷ್ಟಗೊಳಿಸುತ್ತದೆ, ಸಂಪೂರ್ಣ ಅಧಿಕಾರ ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ ಎನ್ನುವ ಅಭಿಪ್ರಾಯ ಅವರಲ್ಲಿ ಶಾಶ್ವತವಾಗಿ ಉಳಿದಿತ್ತು.

ಜಾಗೃತಿ ಅತ್ಯಗತ್ಯ;

ನಂಬುವಿರಾ? ಈ ದೇಶದಲ್ಲಿ

ಬರೆಯುವ

ಪ್ರತಿಯೊಂದು ವಾಕ್ಯವೂ

ಸುಲಿಯುವ ಕತ್ತಿಯನ್ನು

ಹೊಂದಿರುವುದು (ನೀಲು 2-168)

ಸರಕಾರ ತೆಗೆದುಕೊಳ್ಳುವ ನಿರ್ಣಯಗಳು ಬಹುಜನರ ಯೋಗಕ್ಷೇಮ ಹೊಂದಿರಬೇಕು. ಅದು ಗೈರಾಗಿ ಶೋಷಣೆಗೀಡು ಮಾಡಿದರೆ ಜನರು ಸಂಕಷ್ಟಕ್ಕೊಳಗಾಗುತ್ತಾರೆ. ಭೂಮಿ, ನೀರು, ಪರಿಸರದಂತಹ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ಪ್ರಾಮಾಣಿಕ ನಿಲುವುಗಳು ಇರದಿದ್ದರೆ ಜನರು ಸರ್ವನಾಶವಾಗುತ್ತಾರೆ. ಇಂತಹ ವಿಷಯಗಳಲ್ಲಿ ಭ್ರಷ್ಟಾಚಾರ ಎಸಗಲು ಸರಕಾರಗಳು ತುದಿಗಾಲ ಮೇಲಿರುತ್ತವೆ. ಯಾಕೆಂದರೆ ರಾಜಕಾರಣಿಗಳಿಗೆ ಅಲ್ಲಿ ಹಣದ ಸಪ್ಪಳ ಕೇಳಿಸುತ್ತದೆ. ಎಲ್ಲೆಲ್ಲಿ ಹಣ ಇದೆಯೋ ಅದೆಲ್ಲ ಅವರ ಕಣ್ಣುಗಳಲ್ಲಿರುತ್ತದೆ. ಅಧಿಕಾರಸ್ಥರು, ಅಧಿಕಾರಸ್ಥನ ಮಕ್ಕಳು, ಅಳಿಯಂದಿರು, ಪಕ್ಷದ ಕಾರ್ಯಕರ್ತರು, ಎಲ್ಲರೂ ಕತ್ತಿ ಹಿಡಿದು ನಿಲ್ಲುತ್ತಾರೆ. ಅಲ್ಲಿ ಕಬಳಿಕೆಗೆ ಮಿತಿಯೇ ಇರುವುದಿಲ್ಲ. ದೇಹವೇ ಬಾಯಿಯಾಗಿ ನಿಲ್ಲುತ್ತದೆ. ಜನ ದಿಕ್ಕೆಟ್ಟವರಂತೆ ಅಸಹಾಯಕರಾಗಿ ನೋಡುತ್ತಾರೆ;

ಇವತ್ತು ಸರಕಾರ ಬಿತ್ತಿ ಬೆಳೆಯುವುದನ್ನು

ನಿರೀಕ್ಷಿಸುವ ಮನುಷ್ಯ

ನಾಳೆ

ಹುಲಿಸಿಂಹಗಳಿಂದ

ಶಾಸ್ತ್ರೀಯ ಸಂಗೀತ ಬಯಸುವವ (ನೀಲು 2-51)

ಪ್ರಜಾಪ್ರಭುತ್ವ ಸರಕಾರಗಳು ಜನರನ್ನು ಸುಲಿಯುವ ಸಿಂಡಿಕೇಟ್‌ಗಳಾಗಿರುವ ಬಗ್ಗೆ ಲಂಕೇಶ್ ಮತ್ತೆ ಮತ್ತೆ ಎಚ್ಚರಿಸುತ್ತಿದ್ದರು. ಜನರ ಮಧ್ಯದಿಂದ ಆರಿಸಿ ಬರುವ ವ್ಯಕ್ತಿ ಕಾಲಕಳೆದಂತೆ ಏಕಾಧಿಪತಿಯಾಗಿ, ರಾಕ್ಷಸನಾಗಿ ರೂಪಗೊಳ್ಳುವ ಬಗ್ಗೆ ಬಹಳ ಆತಂಕವಿತ್ತು. ಪ್ರಜಾಪ್ರಭುತ್ವದ ಒಟ್ಟು ಚಟುವಟಿಕೆ ಜಾತೀಯತೆಯ ಸರ್ಕಸ್ ಆಗಿ ಪರಿವರ್ತನೆಗೊಂಡಿದ್ದು ಭ್ರಮ ನಿರಸನಗೊಳಿಸಿತ್ತು;

ಉಣ್ಣುವ ಅನ್ನ, ಕುಡಿವ ನೀರನ್ನು ಸಹ

ಪ್ರತ್ಯೇಕವಾಗಿಸಿ

ಜಾತೀಯತೆಯ ನರಕ ಕಟ್ಟಿದ

ಜನಕ್ಕೆ ಸೂರ್ಯ, ಚಂದ್ರ ಯಾವ ಜಾತಿ? (ನೀಲು 2-51)

ಜಾತಿಯ ಆಧಾರದ ಮೇಲೆ ಅಧಿಕಾರ ವಿಂಗಡನೆ ಅಧುನಿಕ ಸೂತ್ರವಾಗಿದೆ. ಸಂಖ್ಯಾ ಬಲದ ಮೇಲೆ ಅಧಿಕಾರದ ಹಂಚಿಕೆ ಪ್ರಮಾಣವೂ ನಿಗದಿಯಾಗುತ್ತದೆ. ಇಲ್ಲಿ ಉಳಿದ ಮಾನದಂಡಗಳಿಗೆ ಅವಕಾಶವಿಲ್ಲ. ಆರಿಸಿಬಂದ ಪಕ್ಷ ಎಲ್ಲವನ್ನೂ ಜಾತಿಯ ಆಧಾರದ ಮೇಲೆ ನಿರ್ಧರಿಸುತ್ತದೆ. ಬೇರೆ ಅಭಿಪ್ರಾಯಗಳು ಎಷ್ಟೇ ಉಕ್ತವಾಗಿದ್ದರೂ ಕಸದಬುಟ್ಟಿ ಸೇರುತ್ತವೆ. ಪಕ್ಷದ ಅಭಿಪ್ರಾಯ ಬಿಟ್ಟು ಉಳಿದ ಯಾವ ಅಭಿಪ್ರಾಯಕ್ಕೂ ಸ್ಥಳವಿರುವುದಿಲ್ಲ. ಪಕ್ಷದ ಪ್ರಣಾಳಿಕೆ ಸಂವಿಧಾನದ ಆಶಯಗಳ ಮೇಲೂ ಕತ್ತಿ ಬೀಸಬಹುದು. ಬಹುಮತ ಎನ್ನುವುದು ಎಲ್ಲವನ್ನೂ ನುಂಗಿ ನೀರು ಕುಡಿಯುವ ಅಸ್ತ್ರವಾಗಿದೆ. ಪಕ್ಷಾಂತರವು ಪ್ರಜಾಪ್ರಭುತ್ವದ ಹೊಸ ಉದ್ಯೋಗವಾಗಿದೆ. ಇದು ಹೊಸ ವ್ಯಾಪಾರದ ಹೊಸ ಗುರುತಾಗಿದೆ. ಇದರ ಗುರಿ ಆರಿಸಿ ಬರುವುದು ಒಂದು ಪಕ್ಷದಿಂದ, ಅಧಿಕಾರ ಹಿಡಿಯುವುದು ಮತ್ತೊಂದು ಪಕ್ಷದಿಂದ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ರಂಜನೀಯ ವಿಕೃತಿಯಾಗಿ ಕಾಣುತ್ತಿದೆ;

ಹುಲಿಯ ಹರಿಕತೆ ಕೇಳಲು

ಹೋಗುವ ಕುರಿ

ಕುರುಡಾಗಿರಲೇಬೇಕು ಎಂಬುದನ್ನು

ಪಕ್ಷಾಂತರಿಗಳ ಬಗ್ಗೆ ಹೇಳುವರು (ನೀಲು 1-177)

ಆ ಕುರುಡಾದ ಕುರಿ ನಂತರ ಅಂತಃಪುರದಲ್ಲಿ ಕಣ್ಣು ತೆರೆಯುತ್ತದೆ. ಈ ರೀತಿಯಾಗಿ ಹುಲಿ ಹಾಗೂ ಕುರಿಯ ಮಧ್ಯದಲ್ಲಿ ಜನ ಹರಿಕತೆ ಕೇಳುವಂತಾಗಿದೆ. ಇದು ಪ್ರಜಾಪ್ರಭುತ್ವದ ಮೈಗೆ ಅಂಟಿದ ಹೊಲಸಾಗಿದೆ.

ದೇಶದ ಬಗೆಗಿನ

ನಿನ್ನ ಕಾಳಜಿಯಿಂದ

ನನ್ನ ತುರುಬಿನ ಮಲ್ಲಿಗೆ ಕೂಡ

ನಿನ್ನನ್ನು ತಟ್ಟದಿರುವ ದಿವಸ

ನೀನು ರೋಗಿ (ನೀಲು 1-202)

        ಇಲ್ಲಿಯ ನೀಲುವಿನ ವ್ಯಂಗ್ಯ ಮತ್ತು ಅಣಕ ರಾಜಕಾರಣಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಿದೆ. ದೇಶದ ಬಗ್ಗೆ ರಾಜಕಾರಣಿ ಹೊಂದಿದ ಕಾಳಜಿ ನೈಜವಾಗಿರಬೇಕು, ಅಲ್ಲಿ ಸೋಗಿರಬಾರದು. ಅದರಲ್ಲಿ ಹೇತುಗಳಿರಕೂಡದು. ಹಾಗಿದ್ದಲ್ಲಿ ಅದನ್ನು ಆ ದಿನವೇ ತಿರಸ್ಕರಿಸುವುದು. 'ಆಗ್ಗೆ ನೀನು ಆ ದಿನದಿಂದ ನನ್ನ ಪಾಲಿನ ರೋಗಿ ಮಾತ್ರ!' ಇಂತಹ ಭಾವನೆ ರಾಜಕಾರಣಿಗಳ ಕುಟುಂಬಗಳಲ್ಲಿ ಪ್ರವೇಶ ಪಡೆದರೆ ದೇಶದ ದೈವವೇ ತೆರೆಯುತ್ತದೆ. ಭವಿಷ್ಯ ಉಜ್ವಲವಾಗುತ್ತದೆ. ಕುಟುಂಬದಿಂದ ಪ್ರಾರಂಭವಾದ ಆದರ್ಶಗಳು ಬಹುಬೇಗ ದೇಶ ಕಟ್ಟುತ್ತವೆ. ಕುಟುಂಬದಿಂದ ಪ್ರಾರಂಭವಾದ ದುಷ್ಟ ಕೆಲಸಗಳು ಬಹು ಬೇಗ ದೇಶ ನಾಶಮಾಡುತ್ತವೆ. ಅದನ್ನೇ ನೀಲು ದಿಟ್ಟವಾಗಿ ಹೇಳಿದ್ದಾಳೆ. ಲಂಕೇಶ್ ರಾಜಕಾರಣಿಗಳು ಹಾಗೂ ರಾಜಕಾರಣದ ಬಗ್ಗೆ ತಮ್ಮ ಲೇಖನಗಳಲ್ಲಿ ಸಮೃದ್ಧವಾಗಿ ಬರೆದಿದ್ದಾರೆ. ಅವರ ರೈತಪರ ಕಾಳಜಿಗಳೂ ವಿಶೇಷವಾಗಿದ್ದವು. ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಎನ್ನುವಂತೆ ರಾಜಕಾರಣಿಗಳಿಗೆ ಬಲವಾದ ಪೆಟ್ಟನ್ನು ಕೊಟ್ಟರು. ರಾಜಕಾರಣದಲ್ಲಿಯ ಅನೈತಿಕತೆಯನ್ನು ಪ್ರಚ್ಛನ್ನವಾಗಿ ಬಹಿರಂಗಗೊಳಿಸಿದರು. ಕೆಲವರು ವಿವಸ್ತ್ರಗೊಂಡಂತೆ ಕುಣಿದಾಡಿದರು. ಬಹುತೇಕರು ಬೆಚ್ಚಿಬಿದ್ದರು. ಅವರ ವಾರಪತ್ರಿಕೆ ನಿರಂತರವಾಗಿ ಈ ಕೆಲಸ ಮಾಡಿತು. ನಾಡಿನ ಜನರು ಕಣ್ಣು ಕಿವಿಯಾಗಿ ಅದಕ್ಕಾಗಿ ಕಾಯುತ್ತಿದ್ದರು. ಆ ರೀತಿಯಲ್ಲಿ ಲಂಕೇಶ್ ಜನರನ್ನು ಜಾಗೃತಗೊಳಿಸಿದ್ದರು. ಹೊಸ ಭಾಷೆಯನ್ನು ಹುಡುಕಿ ತಂದಿದ್ದರು. ಆ ಭಾಷೆಗೆ ಆಯುಧಗಳ ಶಕ್ತಿ ಇತ್ತು. ಈ ರೀತಿಯ ಜನರ ಜಾಗೃತಿ ರಾಜಕಾರಣಿಗಳನ್ನು ಕ್ಷೋಭೆಗೀಡುಮಾಡಿತ್ತು. ಹೀಗಾಗಿ ಕೇಳುವವರೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದ ರಾಜಕಾರಣಿಗಳು ಶಬ್ದಶಃ ಭಯ ಬಿದ್ದಿದ್ದರು. ಲಂಕೇಶ್ ಹೇಳಿದ್ದನ್ನು ಜನ ನಂಬುತ್ತಿದ್ದರು. ಆ ರೀತಿಯ ವಿಶ್ವಾಸ ಹುಟ್ಟಿತ್ತು. ಜನರ ಮನಸ್ಸಿನಲ್ಲಿರುವ ಅಮೂರ್ತ ಅಭಿಪ್ರಾಯಗಳಿಗೆ ಸ್ಪಷ್ಟರೂಪ ಕೊಡುತ್ತಿದ್ದರು. ಜನರ ಜಾಗೃತಾವಸ್ಥೆ ಚುರುಕಾಗುತ್ತಿತ್ತು. ಸಾರ್ವಜನಿಕರ ಟೀಕೆ ಟಿಪ್ಪಣಿಗಳು ಪ್ರಾರಂಭವಾಗುತ್ತಿದ್ದವು. ಲಂಕೇಶ್ ಲೇಖನಿ ಸರಕಾರಗಳನ್ನು ಪಲ್ಲಟಗೊಳಿಸಿತ್ತು. ಇದಕ್ಕೆಲ್ಲ ಲಂಕೇಶ್ ನೈತಿಕ ನಿಲುವುಗಳು ಕಾರಣವಾಗಿದ್ದವು.

(ನೀಲು ಮಾತು ಮೀರಿದ ಮಿಂಚು ಕೃತಿಯಿಂದ)


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries