HEALTH TIPS

ಕಾಸರಗೋಡು ಕನ್ನಡಿಗರ ಮುಗಿಯದ ಬವಣೆ: ಭಾಷಾ ಅಲ್ಪಸಂಖ್ಯಾತರ ಕಡೆಗಣನೆ

         ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಇಲ್ಲಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ ಸಮಸ್ಯೆಗಳನ್ನು ಕೇಳುವಲ್ಲಿ ಮತ್ತು ಕನ್ನಡಿಗರ ಬಗ್ಗೆ ಕಾಳಜಿ ತೋರುವಲ್ಲಿ ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮುಂದುವರಿದಿದೆ.


            ಕಾಸರಗೋಡಿನಲ್ಲಿ 3 ಲಕ್ಷದಷ್ಟು ಭಾಷಾ ಅಲ್ಪಸಂಖ್ಯಾತರು ಇದ್ದಾರೆ. ಇವರಲ್ಲಿ ಕನ್ನಡಿಗರ ಸಂಖ್ಯೆಯೇ ದೊಡ್ಡದು. ಕೇರಳ ಸರ್ಕಾರವು ಮಲಯಾಳ ಭಾಷೆಗೆ ಆದ್ಯತೆ ನೀಡುವ ಕಾರಣ, ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಬಹುತೇಕ ಎಲ್ಲಾ ಆದೇಶಗಳು, ಸುತ್ತೋಲೆಗಳು ಮತ್ತು ಅರ್ಜಿ ನಮೂನೆಗಳು ಮಲಯಾಳದಲ್ಲಿಯೇ ಇರುತ್ತದೆ. ಇವುಗಳನ್ನು ಅರ್ಥಮಾಡಿಕೊಳ್ಳಲು ಕನ್ನಡಿಗರು ಭಾಷಾಂತರಕಾರರ ಮೊರೆ ಹೋಗಬೇಕಾದುದು ಅನಿವಾರ್ಯ. ಕನ್ನಡವೇ ಗೊತ್ತಿಲ್ಲದ ಅಧಿಕಾರಿಗಳನ್ನು, ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿನ 20 ಗ್ರಾಮ ಪಂಚಾಯಿತಿಗಳಿಗೆ ನಿಯೋಜನೆ ಮಾಡಲಾಗಿದೆ.

            'ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಕನ್ನಡಿಗರ ಬಗ್ಗೆ ಕಾಳಜಿ ತೋರುವುದೇ ಇಲ್ಲ. ಕನ್ನಡಿಗರ ಮೂಲ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದೂ ಇಲ್ಲ. ಈಗ ಕನ್ನಡಿಗರ ಪ್ರತಿನಿಧಿಗಳನ್ನು ಭೇಟಿ ಮಾಡಿರುವ ಬಿಜೆಪಿ ಮುಖಂಡರು ನಮ್ಮ ಸಮಸ್ಯೆಗಳನ್ನು ಕೇಳಿಕೊಂಡಿದ್ದಾರೆ' ಎಂದು ಕಾಸರಗೋಡು ಕರ್ನಾಟಕ ಸಮಿತಿಯ ಪದಾಧಿಕಾರಿಗಳು ಹೇಳಿದ್ದಾರೆ.

          2012ರಲ್ಲಿ ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಪ್ರಭಾಕರನ್ ನೇತೃತ್ವದ ಆಯೋಗವು ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ವರದಿ ಸಿದ್ಧಪಡಿಸಿತ್ತು. 'ಇಲ್ಲಿನ ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲ. ಅವರು ಮಲಯಾಳದಲ್ಲಿಯೇ ವ್ಯವಹರಿಸುತ್ತಾರೆ. ಆದರೆ ಕನ್ನಡ ಮತ್ತು ತುಳು ಮಾತ್ರವೇ ಗೊತ್ತಿರುವ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ಮಲಯಾಳದಲ್ಲಿಯೇ ಬರೆಯಲಾಗುತ್ತದೆ. ಎಫ್‌ಐಆರ್‌ನಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದೇ ಇದ್ದರೂ, ಭಾಷಾ ಅಲ್ಪಸಂಖ್ಯಾತರು ಅದಕ್ಕೆ ಸಹಿ ಹಾಕಬೇಕಾದ ಪರಿಸ್ಥಿತಿ ಇದೆ' ಎಂದು ವರದಿಯಲ್ಲಿ ವಿವರಿಸಲಾಗಿತ್ತು.

                               ಪ್ರತಿಭಟನಾರ್ಥ ಸ್ಪರ್ಧೆ

       ಕಾಸರಗೋಡು ಜಿಲ್ಲೆ ಹಿಂದುಳಿದಿರುವುದಕ್ಕೆ ರಾಜಕೀಯ ಪಕ್ಷಗಳ ವಿರುದ್ಧ ಪ್ರತಿಭಟನಾರ್ಥವಾಗಿ ವ್ಯಕ್ತಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

         ಎಂ.ಟೆಕ್ ಪದವೀಧರರಾಗಿರುವ ಶ್ರೀನಾಥ್ ಶಶಿ ಅವರು ಕಾಸರಗೋಡಿನ ಕಾಂ‍ಞಂಗಾಡ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕಾಸರಗೋಡು ಉನ್ನತ ಶಿಕ್ಷಣದಲ್ಲಿ ಹಿಂದುಳಿದಿದೆ ಎಂದು ಅವರು ಹೇಳಿದ್ದಾರೆ. 'ಮೂವ್‌ಮೆಂಟ್ ಫಾರ್ ಬೆಟರ್‌ ಕೇರಳ' ಹೆಸರಿನಲ್ಲಿ ಅವರು ಚುನಾವಣೆ ಎದುರಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries