ಮುಂಬೈ: ಕರೊನಾ ದೇಶದ ಜನತೆಯ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವರು ದೇವರಂತೆ ಜನರ ಸಹಾಯಕ್ಕೆ ಮುಂದಾಗಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಮುಂಬೈನಲ್ಲಿ ಕರೊನಾ ದಾಳಿ ಹೆಚ್ಚಾಗಿ ರೋಗಿಗಳು ಆಕ್ಸಿಜನ್ಗಾಗಿ ಪರದಾಡುತ್ತಿರುವಾಗ ಆಕ್ಸಿಜನ್ ಮ್ಯಾನ್ ಆಗಿ ಹೊರಹೊಮ್ಮಿರುವವರು ಶಹನವಾಜ್ ಶೇಖ್.
ಶಹನವಾಜ್ ಶೇಖ್ರನ್ನು ಸ್ಥಳೀಯರು ಆಕ್ಸಿಜನ್ ಮ್ಯಾನ್ ಎಂದೇ ಕರೆಯುತ್ತಾರೆ. ಕಳೆದ ವರ್ಷ ಕರೊನಾ ದಾಳಿ ಹೆಚ್ಚಾದ ಸಮಯದಿಂದ ಈವರೆಗೆ ಕರೊನಾ ಸೋಂಕಿತರ ಸಹಾಯಕ್ಕೆ ಈ ವ್ಯಕ್ತಿ ಸದಾ ಮುಂದಿದ್ದಾರೆ. ಈ ವರ್ಷ ಇನ್ನಷ್ಟು ಜನರು ಶಹನವಾಜ್ ಜತೆ ಕೈ ಜೋಡಿಸಿದ್ದು, ಅವರದ್ದೇ ಒಂದು ಹೆಲ್ಪ್ಲೈನ್ ಅನ್ನೂ ಮಾಡಿಕೊಂಡಿದ್ದಾರಂತೆ. ಆಕ್ಸಿಜನ್ ಬೇಡಿಕೆ ಹೆಚ್ಚಾಗಿ, ಅದಕ್ಕೆ ಹೊಂದಿಸಲು ಹಣವಿಲ್ಲದಿದ್ದಾಗ ತನ್ನ 22 ಲಕ್ಷ ರೂಪಾಯಿ ಬೆಲೆಯ ಕಾರನ್ನೇ ಮಾರಿ ಅದರಿಂದ ಬಂದ ಹಣದಲ್ಲಿ 160 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ಹತ್ತಿರದಲ್ಲಿ ಯಾರೇ ಆಕ್ಸಿಜನ್ ಕೊರತೆಯೆಂದು ಶಹನವಾಜ್ಗೆ ಕರೆ ಮಾಡಿದರೆ ಕೂಡಲೇ ಅವರಿಗೆ ಸಹಾಯ ಮಾಡಲಾಗುತ್ತಿದಯಂತೆ. ಈವರೆಗೆ ಸುಮಾರು 4 ಸಾವಿರ ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಟ್ಟಿದೆಯಂತೆ ಇವರ ತಂಡ. ಕರೊನಾದ ಕಷ್ಟದ ಸಮಯದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವಿನ ಹಸ್ತ ಚಾಚುತ್ತಿರುವ ಇವರೇ ನಮ್ಮ ಪಾಲಿನ ದೇವರೆನ್ನುತ್ತಿದ್ದಾರೆ ನೆರವು ಪಡೆದ ಸಾಕಷ್ಟು ಜನರು.



