ನವದೆಹಲಿ: ಈಗ ಕರೊನಾ ಪಾಸಿಟಿವ್ ಎನ್ನುವುದು ಮಾಮೂಲಿ ಎನ್ನುವಂತಾಗಿದೆ. ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಬಂದಾಗಲೂ ಪರೀಕ್ಷೆ ಮಾಡಿಸಿಕೊಂಡರೆ ಕರೊನಾ ಪಾಸಿಟಿವ್ ಎಂದು ತೋರಿಸುವ ಘಟನೆಗಳೂ ನಡೆಯುತ್ತಿವೆ.
ಪಾಸಿಟಿವ್ ಬಂದಾಕ್ಷಣ ಎಲ್ಲರೂ ಗಾಬರಿ ಬೀಳುವುದು, ಹಿಂದು ಮುಂದೆ ನೋಡದೇ ಆಸ್ಪತ್ರೆಗೆ ದೌಡಾಯಿಸುವುದು ನಡೆದೇ ಇದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಿದೆ.
ವಿಡಿಯೋದಲ್ಲಿ ಏನಿದೆ?
ಟಾಟಾ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎಸ್.ಪ್ರಮೇಶ್ ಅವರು ಕೆಲವೊಂದು ಮಾಹಿತಿಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ. ಅದೇನೆಂದರೆ, ಸದಾ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಿ, ದ್ರವಾಂಶ ಹೆಚ್ಚಿಗೆ ಇರುವ ಆಹಾರದ ಜತೆಗೆ ಯೋಗ, ಪ್ರಾಣಾಯಾಮ ಮಾಡಿ. ಇದರಿಂದ ಕರೊನಾ ಸೋಂಕನ್ನು ತಕ್ಕಮಟ್ಟಿಗೆ ನಿಭಾಯಿಸಬಹುದು.
ಜ್ವರದ ಲಕ್ಷಣ ಕಂಡುಬಂದರೆ ಆಮ್ಲಜನಕದ ಮಟ್ಟವನ್ನು ಮೊದಲು ತಿಳಿದುಕೊಂಡರೆ ಸಾಕು. ಒಂದು ವೇಳೆ ದೇಹದಲ್ಲಿನ ಆಮ್ಲಜನಕದ ಮಟ್ಟವು 94ಕ್ಕಿಂತ ಹೆಚ್ಚಿದ್ದರೆ, ಆಸ್ಪತ್ರೆಗೆ ಸೇರುವ ಅಗತ್ಯವಿಲ್ಲ. ಆಮ್ಲಜನಕದ ಮಟ್ಟವನ್ನು ನಿಖರವಾಗಿ ಪರೀಕ್ಷಿಸಲು ಕರೊನಾವೈರಸ್ ಸೋಂಕಿತ ವ್ಯಕ್ತಿ ತನ್ನ ಕೋಣೆಯಲ್ಲಿ ಆರು ನಿಮಿಷಗಳ ಕಾಲ ನಡೆಯಬೇಕು. ನಂತರ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಬೇಕು. ಆರು ನಿಮಿಷಗಳ ಕಾಲ ವಾಕ್ ಮಾಡಿದ ನಂತರ ರೋಗಿಯ ಹಿಂದಿನ ಆಮ್ಲಜನಕದ ಮಟ್ಟವು 4 ಪ್ರತಿಶತ ಅಥವಾ ಹೆಚ್ಚಿನ ಏರಿಳಿತವಾಗಿದ್ದರೆ ಮಾತ್ರ ಆಸ್ಪತ್ರೆಯನ್ನು ಸಂಪರ್ಕಿಸಬೇಕು.
ರೋಗಿಯ ಆಮ್ಲಜನಕದ ಮಟ್ಟವು ಉತ್ತಮವಾಗಿದ್ದರೆ ಮತ್ತು ಜ್ವರವನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಯಿಲ್ಲದಿದ್ದರೆ, ಅಂತಹ ರೋಗಿಯು ಪ್ಯಾರೆಸಿಟಮಾಲ್ ತೆಗೆದುಕೊಂಡು ಬೇಗ ಚೇತರಿಸಿಕೊಳ್ಳಬಹುದು ಎಂದು ವೀಡಿಯೊದಲ್ಲಿ ಸಲಹೆ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.


