ಕಾಸರಗೋಡು: ರಾಜ್ಯದ ಕೋವಿಡ್ ರೋಗಿಗಳಿಗಾಗಿ ಟಾಟಾ ಸಂಸ್ಥೆ ಏಳು ತಿಂಗಳ ಹಿಂದೆ ಕಾಸರಗೋಡಿನಲ್ಲಿ ನಿರ್ಮಿಸಿಕೊಟ್ಟಿರುವ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡದಿರುವುದರಿಂದ ಎರಡನೇ ಹಂತದ ಕೋವಿಡ್ ಆಗಮಿಸುತ್ತಿದ್ದಂತೆ ಟಾಟಾ ಆಸ್ಪತ್ರೆಗೆ ಹೊಸದಾಗಿ ಕಾಯಕಲ್ಪ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. 540ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ 111ಮಂದಿ ಮಾತ್ರ ಚಿಕಿತ್ಸೆಯಲ್ಲಿದ್ದಾರೆ. ಉದ್ಯೋಗಿಗಳ ಕೊರತೆಯೂ ಕಾಡುತ್ತಿದೆ. 2020 ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರ 191ಮಂದಿ ಸಿಬ್ಬಂದಿಯನ್ನು ನೇಮಕಮಾಡಿಕೊಂಡಿದ್ದರೂ, ಇದರ ಅರ್ಧದಷ್ಟು ಮಂದಿಯನ್ನು ಮಾತ್ರ ಕರ್ತವ್ಯಕ್ಕೆ ನೇಮಿಸಿಕೊಳ್ಳಲಾಗಿದೆ. 25ರಷ್ಟು ವೈದ್ಯರ ಕೊರತೆಯಿದೆ. ಮೂಲ ಸೌಕರ್ಯ ಒದಗಿಸಿಕೊಡಬೇಕಾದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ, ಪ್ರತಿಷ್ಠಿತ ಸಂಸ್ಥೆಯೊಂದು ಕೊಡುಗೆಯಾಗಿ ನೀಡಿರುವ ಈ ಆಸ್ಪತ್ರೆಗೆ ಗರಬಡಿದಂತಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಹೆಚ್ಚುವರಿ 150 ಬೆಡ್ ಗಳ ಸಜ್ಜೀಕರಣ ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಪ್ರಸಕ್ತ 200 ಮಂದಿಗೆ ದಾಖಲಾತಿ ಚಿಕಿತ್ಸೆ ನೀಡುವ ಸೌಲಭ್ಯ ಇಲ್ಲಿದೆ. ಆಸ್ಪತ್ರೆ ಆರಂಭಗೊಂಡ ನಂತರ ಈ ವರೆಗೆ 1410 ಮಂದಿ ಕೋವಿಡ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 110 ಮಂದಿ ಗುಣಮುಖರಾಗಿದ್ದಾರೆ. ಗಂಭೀರ ಸ್ಥಿತಿಯ ಶ್ರೇಣಿಯ ಬಿ,ಸಿ, ರೋಗಿಗಳಿಗೆ ಪ್ರಧಾನವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 12 ಐ.ಸಿ.ಯು. ಬೆಡ್ ಗಳೂ, ಸುಮಾರು 70
ಸೆಂಟ್ರಲೈಸ್‍ಡ್ ಪೈಪ್ ಲೈನ್ ಸೌಲಭ್ಯಗಳ ಸಹಿತ ಬೆಡ್ ಗಳು ಇಲ್ಲಿವೆ. ಈಗಾಗಲೇ 70 ಮಂದಿ ಗಂಭೀರ ಸ್ಥಿತಿಯ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಂದು ಕಂಟೈನರ್ ನಲ್ಲಿ 4 ಬೆಡ್ ಎಂಬ ರೀತಿಯಲ್ಲಿ 540 ಮಂದಿಗೆ ದಾಖಲಾತಿ ಚಿಕಿತ್ಸೆ ಸೌಲಭ್ಯಗಳಿವೆ. ಆದರೆ ಕಚೇರಿ ಸೌಲಭ್ಯ, ಪ್ರಯೋಗಾಲಯ, ಫಾರ್ಮಸಿ, ಫಾರ್ಮಸಿ ಸ್ಟೋರ್ ಸಿಬ್ಬಂದಿಗೆ ವಸತಿಗಾಗಿ ಕಂಟೈನರ್ ಮೀಸಲಿರಿಸುವ ಕಾಯಕ ಬಾಕಿಯುಳಿದಿದೆ. ಐ.ಸಿ.ಯು. ವಾರ್ಡ್ ಗಳು ಸಜ್ಜೀಕರಿಸುವ ವೇಳೆ ಒಂದು ಕಂಟೈನರ್ ನಲ್ಲಿ 3 ಬೆಡ್ ಗಳು ಮಾತ್ರ ಸಜ್ಜುಗೊಳಿಸಲು ಸಾಧ್ಯ. ಬೆಡ್ ಗಳ ಅಂತರ ಇನ್‍ಫೆಕ್ಷನ್ ಕಂಟ್ರೋಲರ್‍ನ ಹಿನ್ನೆಲೆಯಲ್ಲಿ ಸಜ್ಜುಗೊಳಿಸಲಾಗುತ್ತದೆ. ಇದೆಲ್ಲವನ್ನೂ ಪರಿಶೀಲಿಸಿ 150 ಬೆಡ್ ಗಳನ್ನು ಹೆಚ್ಚುವರಿಯಾಗಿ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.





