ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರಕ್ಕೆ ಶಿಲಾನ್ಯಾಸ ಹಾಗೂ ನಿಧಿ ಸಮರ್ಪಣೆ ಕಾರ್ಯಕ್ರಮ ಏ.24 ರಂದು ಶನಿವಾರ ನಡೆಯಲಿದೆ.
ಶನಿವಾರ ಬೆಳಿಗ್ಗೆ 8.22 ರ ಸುಮುಹೂರ್ತದಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ದಿವ್ಯಹಸ್ತದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡ ವರ್ಮ ಅರಸರ ಸಮಕ್ಷಮ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಶ್ರೀಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸುವರು. ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಗಳು, ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿ, ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಹಾಗೂ ಯೋಗಾನಂದ ಸರಸ್ವತಿ ಶ್ರೀಗಳು ಕೊಂಡೆವೂರು ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಮಲಬಾರ್ ದೇವಸ್ವಂ ಬೋರ್ಡ್ ನ ಸಹಾಯಕ ಕಮಿಷನರ್ ಕೆ.ಸತೀಶನ್, ವಾಸ್ತುಶಿಲ್ಪಿ ಉಣ್ಣಿಕೃಷ್ಣನ್ ನಂಬೂದಿರಿ, ಶಿಲ್ಪಿ ದೊರೈಸ್ವಾಮಿ ಕಾರ್ಕಳ, ನ್ಯಾಯವಾದಿ ಸುಬ್ಬಯ್ಯ ರೈ, ಉದ್ಯಮಿ ಸುರೇಶ್, ಕೆ.ಪಿ.ರೈ, ರಾಮಪ್ರಸಾದ್ ಕಾಸರಗೋಡು, ಅಭಿಲಾಷ್, ಲಕ್ಷ್ಮೀಶ ಭಂಡಾರಿ ಮೊದಲಾದವರು ಉಪಸ್ಥಿತರಿರುವರು. ಕ್ಷೇತ್ರ ಜೀರ್ಣೋದ್ದಾರ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯದರ್ಶಿ ಶಂಕರ ಆಳ್ವ, ಜೊತೆ ಕಾರ್ಯದರ್ಶಿ ಜಯಾನಂದ ರಾವ್ ಮೊದಲಾದವರು ಉಪಸ್ಥಿತರಿರುವರು.





