ನವದೆಹಲಿ: ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಆಮ್ಲಜನಕವಿದೆ. ಆದರೆ, ಆಮ್ಲಜನಕ ಉತ್ಪಾದಕ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಿಗೆ ಸಾಗಿಸುವತ್ತ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.
ಭಾರತೀಯ ವಾಯುಪಡೆಯ ಸಾರಿಗೆ ವಿಮಾನದ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ಆಮ್ಲಜನಕ ಸಾಗಿಸುವ ಟ್ಯಾಂಕರ್‌ಗಳ ವಹಿವಾಟು ಸಮಯವನ್ನು 4-5 ದಿನಗಳಿಂದ 1-2 ಗಂಟೆಗಳಿಗೆ ಕಡಿಮೆ ಮಾಡಲಾಗಿದೆ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ.
'ನಮ್ಮಲ್ಲಿ ಸಾಕಷ್ಟು ಆಮ್ಲಜನಕವಿದೆ. ಆದರೆ, ಆಮ್ಲಜನಕವನ್ನು ಸಾಗಿಸುವುದೇ ಸಮಸ್ಯೆಯಾಗಿದ್ದು, ಎಲ್ಲಾ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಾವು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ' ಎಂದು ಗೋಯಲ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ದೇಶದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ, 'ಉತ್ಪಾದಕ ರಾಜ್ಯಗಳಿಂದ ಹೆಚ್ಚಿನ ಬೇಡಿಕೆಯಿರುವ ಪ್ರದೇಶಗಳಿಗೆ ಆಮ್ಲಜನಕದ ಸಾಗಣೆಯ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿರುವುದರಿಂದ ಆಮ್ಲಜನಕಕ್ಕೆ ಆತಂಕಪಡುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.
ಜಿಪಿಎಸ್ ಮೂಲಕ ನೈಜ-ಸಮಯದ ಆಧಾರದ ಮೇಲೆ ಆಮ್ಲಜನಕ-ಸಾಗಿಸುವ ಟ್ಯಾಂಕರ್‌ಗಳ ಚಲನೆಯನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ. ಇದು ಕಡಿಮೆ ಸಮಯದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಲಭ್ಯವಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಅಗತ್ಯವಿರುವ ವೈದ್ಯಕೀಯ ಆಮ್ಲಜನಕದ ವಿತರಣೆಯನ್ನು ವೇಗಗೊಳಿಸಲು ದೇಶದಿಂದ ವಿವಿಧ ಆಮ್ಲಜನಕ ಕೇಂದ್ರಗಳಲ್ಲಿ ಖಾಲಿ ಆಮ್ಲಜನಕ ಟ್ಯಾಂಕರ್‌ಗಳು ಮತ್ತು ಸಂಗ್ರಹಕಗಳನ್ನು ತಲುಪಿಸುವ ಪ್ರಯತ್ನವನ್ನು ಶುಕ್ರವಾರದಿಂದ ಗೃಹ ಸಚಿವಾಲಯ ಆರಂಭಿಸಿದೆ.
ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಭೀಕರವಾಗಿದೆ, ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಪ್ರಕರಣಗಳು ದಾಖಲಾಗಿವೆ. ಸೋಮವಾರ ಕೋವಿಡ್‌ನಿಂದ 2,812 ಸಾವುಗಳು ಸಂಭವಿಸಿವೆ.
ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗಗಳಿಂದ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಅತ್ಯಂತಗ ಅಗತ್ಯವಿರುವ ರಾಜ್ಯಗಳಲ್ಲಿ ಆಮ್ಲಜನಕ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ.




