ನವದೆಹಲಿ: ಇತ್ತೀಚೆಗೆ ಪ್ರಸಿದ್ಧ ಆನ್ಲೈನ್ ಶಾಪಿಂಗ್ ಸಂಸ್ಥೆಯೊಂದರಲ್ಲಿ ಒಳಉಡುಪಿನ ಮೇಲೆ ಕನ್ನಡದ ಬಾವುಟ ಪ್ರಿಂಟ್ ಮಾಡಿ ಅವಮಾನಗೊಳಿಸಲಾಗಿತ್ತು. ಈ ವಿಚಾರ ತಣ್ಣಗಾಗುತ್ತಿದ್ದಂತೆಯೇ ಇದೀಗ ಮತ್ತೊಂದು ಇಂತದ್ದೇ ಘಟನೆ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಇನ್ಸ್ಟಾಗ್ರಾಂನಲ್ಲಿ ಹಿಂದೂಗಳ ದೇವ ಶಿವನನ್ನು ವೈನ್ ಗ್ಲಾಸ್ನೊಂದಿಗೆ ಚಿತ್ರಿಸಲಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪದ್ಮಾಸನ ಹಾಕಿ ಕುಳಿತಿರುವ ಶಿವ ಒಂದು ಕೈನಲ್ಲಿ ಮೊಬೈಲ್ ಹಿಡಿದುಕೊಂಡಿದ್ದಾನೆ. ಇನ್ನೊಂದು ಕೈನಲ್ಲಿ ವೈನ್ ಗ್ಲಾಸ್ ಹಿಡಿದಿದ್ದಾನೆ. ಹೆಡ್ ಫೋನ್ ಹಾಕಿಕೊಂಡು ಕಣ್ಣನ್ನೂ ಹೊಡೆಯುತ್ತಿದ್ದಾನೆ. ಇಂತದ್ದೊಂದು ಸ್ಟಿಕ್ಕರ್ನ್ನು ಇನ್ಸ್ಟಾಗ್ರಾಂನಲ್ಲಿ ಬಿಡಲಾಗಿದೆ. ಇದನ್ನು ಕಂಡಿರುವ ನೆಟ್ಟಿಗರು ಗರಂ ಆಗಿದ್ದಾರೆ. ಯಾವುದೇ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ನೀವು ಮಾಡಬಾರದು ಎಂದು ಇನ್ಸ್ಟಾಗ್ರಾಂ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೈನ್ ಗ್ಲಾಸ್ ಶಿವನನ್ನು ಚಿತ್ರಿಸಿರುವ ಇನ್ಸ್ಟಾಗ್ರಾಂ ವಿರುದ್ಧ ರಾಷ್ಟ್ರ ರಾಜಧಾನಿ ನವದೆಹಲಿಯ ನಿವಾಸಿ, ಬಿಜೆಪಿ ನಾಯಕ ಮನೀಶ್ ಸಿಂಗ್ ದೂರು ದಾಖಲಿಸಿದ್ದಾರೆ. 'ಆರೋಪಿ ಸ್ಥಾನದಲ್ಲಿರುವವರು ಉದ್ದೇಶಪೂರ್ವಕವಾಗಿ ಶಿವನನ್ನು ಅಂತಹ ಸ್ಥಿತಿಯಲ್ಲಿ ಚಿತ್ರಿಸುವ ಮೂಲಕ ದೂರುದಾರ ಸೇರಿದಂತೆ ಲಕ್ಷಾಂತರ ಹಿಂದೂಗಳ ಭಾವನೆಗಳನ್ನು ನೋಯಿಸುತ್ತಿದ್ದಾನೆ' ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ರೀತಿಯ ದೂರು ಕೇಳಿಬಂದ ಕೆಲವೇ ಕ್ಷಣಗಳಲ್ಲಿ ಆ ಸ್ಟಿಕ್ಕರ್ ಮಾಯವಾಗಿರುವುದಾಗಿ ಹೇಳಲಾಗಿದೆ.


