ಕಾಸರಗೋಡು: ಇಂದು ಜೂನ್ 10 ಗುರುವಾರ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳ ಲೋಕದ ಕೌತುಕವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ.
ಸೂರ್ಯನ ಕೇಂದ್ರ ಭಾಗ ಮುಚ್ಚಿಕೊಂಡು ಸುತ್ತ ಬಳೆ ತೊಟ್ಟಂತೆ ಸೂರ್ಯ ಗೋಚರವಾಗುವುದಕ್ಕೆ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ.
ಸ್ಪರ್ಶ ಕಾಲ, ಮೋಕ್ಷ ಕಾಲ: ಕಂಕಣ ಸೂರ್ಯಗ್ರಹಣ ಇಂದು ಭೂಮಿಗೆ ಸ್ಪರ್ಶವಾಗುವುದು ಮಧ್ಯಾಹ್ನ 1 ಗಂಟೆ 31 ನಿಮಿಷಕ್ಕೆ, ಗ್ರಹಣದ ಮಧ್ಯಕಾಲ ಅಪರಾಹ್ನ 4 ಗಂಟೆ 23 ನಿಮಿಷಕ್ಕೆ ಹಾಗೂ ಗ್ರಹಣದ ಮೋಕ್ಷ ಕಾಲ ಸಂಜೆ 6 ಗಂಟೆ 40 ನಿಮಿಷಕ್ಕೆ, ಗ್ರಹಣದ ಉತ್ತುಂಗ ಅಂದರೆ ಮಧ್ಯ ಕಾಲದಲ್ಲಿ ಸೂರ್ಯ ಕಂಕಣ ಬಳೆ ತೊಟ್ಟಂತೆ ಕಾಣುತ್ತಾನೆ. ಸಾಯಂಕಾಲ 6 ಗಂಟೆ 40 ನಿಮಿಷಕ್ಕೆ ಗ್ರಹಣ ಮುಗಿಯಲಿದೆ.
ಈ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ರಷ್ಯಾ, ಗ್ರೀನ್ ಲ್ಯಾಂಡ್, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಗೋಚರವಾಗುತ್ತದೆ.
ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ವಿಜ್ಞಾನಿಗಳು ಇದನ್ನು ವಿಶ್ಲೇಷಿಸಿದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದಿಂದ ಪ್ರಕೃತಿಯಲ್ಲಿ, ಮನುಷ್ಯ ಜೀವನದಲ್ಲಿ ಆಗುವ ಆಗುಹೋಗುಗಳು, ಒಳಿತು-ಕೆಡುಕುಗಳ ಬಗ್ಗೆ ಮಾತನಾಡುತ್ತಾರೆ.


