HEALTH TIPS

ಈ ಪರಿಮಿತ ವಿಶ್ವಕ್ಕೆ ಜನಬಾಧೆ

         1800ರಲ್ಲಿ 100 ಕೋಟಿ ಇದ್ದ ವಿಶ್ವದ ಜನಸಂಖ್ಯೆ ಇದೀಗ 782 ಕೋಟಿ! ಇದರಲ್ಲಿ ಶೇಕಡ 17ರಷ್ಟು ಭಾರತದ್ದೇ ಪಾಲು. ನಿರೀಕ್ಷಿತ ಮಟ್ಟದಲ್ಲಿ ಸಾಕ್ಷರತೆ ಇಲ್ಲವಾದ್ದರಿಂದ ಕುಟುಂಬ ಯೋಜನೆಗೆ ಹಿನ್ನಡೆ. ವಿಶ್ವ ಪರಿಮಿತ. ಆದ್ದರಿಂದ ಅದು ಪರಿಮಿತ ಜನಸಂಖ್ಯೆಯನ್ನು ಮಾತ್ರ ಸಲಹಬಲ್ಲದು. ಇದು ಸರಳ ತರ್ಕ.

        ಜಗತ್ತೇ ಒಂದು ಕುಟುಂಬದಂತೆ ಎನ್ನುವ ಆಶಯ ಅದೆಷ್ಟು ಸವಕಲಾಗಿದೆ ಗೊತ್ತೇ? ಭುವಿಯೆಂಬ ಈ ಸೂರಿನಡಿ ಶೇಕಡ 13ರಷ್ಟು ಜನರಿಗೆ, ಹೊಟ್ಟೆ ತುಂಬಿದರೆ ಹೇಗಿರುತ್ತದೆ ಎನ್ನುವ ಅನುಭವವೇ ಇಲ್ಲದಷ್ಟು ಹಸಿವು ಕಾಡಿದೆ. ಪ್ರತಿವರ್ಷ 20 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಅಸುನೀಗುತ್ತಿವೆ. ವೈಪರೀತ್ಯ ನೋಡಿ... ಜಗತ್ತಿನ ಒಂದೆಡೆ, ವೈದ್ಯರ ಎಚ್ಚರಿಕೆ ನಡುವೆಯೂ ಬೊಜ್ಜು ನಿರ್ಲಕ್ಷಿಸುವವರು, ಇನ್ನೊಂದೆಡೆ, ಅರೆಹೊಟ್ಟೆಯವರು.

           ಜನ ಅಧಿಕವಾದರೆ ಪ್ರಾಕೃತಿಕ ಸಂಪನ್ಮೂಲಗಳು ತ್ವರಿತವಾಗಿ ಬಳಕೆಯಾಗುತ್ತವೆ. ಅರಣ್ಯ ನಾಶ, ಬಡತನ, ನಿರುದ್ಯೋಗ, ವಿಶೇಷವಾಗಿ ಮಹಿಳೆಯರ ಆರೋಗ್ಯ, ವಾಯುಗುಣದ ಏರುಪೇರು, ಜಾಗತಿಕ ತಾಪಮಾನ...ಒಂದೇ ಎರಡೇ? ಜನ ಹೆಚ್ಚಿದಂತೆ ತ್ಯಾಜ್ಯದ ರಾಶಿ ಅಗಾಧ. ಗಾಳಿ, ನೀರು ಮಲಿನ. ಮನುಷ್ಯರಷ್ಟೇ ಬಾಧೆ ಅನುಭವಿಸರು, ಇತರ ಜೀವವೈವಿಧ್ಯಗಳೂ.

          ವಿಶ್ವಸಂಸ್ಥೆ ವತಿಯಿಂದ 1987ರಿಂದಲೂ ಜುಲೈ 11ರಂದು 'ವಿಶ್ವ ಜನಸಂಖ್ಯಾ ದಿನ' ಆಚರಿಸ ಲಾಗುತ್ತಿದೆ. ಆ ವರ್ಷ ಜಗತ್ತಿನ ಜನಸಂಖ್ಯೆಯಾಗಲೇ 500 ಕೋಟಿ ಮುಟ್ಟಿತ್ತು. ಜನಸಂಖ್ಯೆ ಏರಿಕೆ, ಅದರಿಂದ ಉದ್ಭವಿಸುವ ನಾನಾ ಸಮಸ್ಯೆಗಳ ಕುರಿತು ಜಗದಾದ್ಯಂತ ಚರ್ಚೆ, ಸಂವಾದ, ಉಪನ್ಯಾಸಗಳು ಏರ್ಪಡುತ್ತವೆ. ಜನಜಾಗೃತಿಯೇ ಉದ್ದೇಶ. ಧರೆಯ ಆಶ್ರಯಕ್ಕೆ ಇತಿಮಿತಿಯಿಲ್ಲ ಎನ್ನುವುದು ಮೌಢ್ಯ. ಕೊರೊನಾ ಎರಡನೇ ಅಲೆ ಭಾರತದಲ್ಲಿ ತೀವ್ರವಾದುದಕ್ಕೆ ಜನಸಾಂದ್ರತೆ ಕೂಡ ಒಂದು ಕಾರಣ ಎನ್ನಬಹುದು. ಲಸಿಕೆ ಹಾಕುವುದಿರಲಿ, ದೈಹಿಕ ಅಂತರ ಪಾಲನೆ ತಾನೆ ಹೇಗೆ? ರೋಗಿಗಳಿಗೆ ಆಸ್ಪತ್ರೆ, ಚಿಕಿತ್ಸೆ, ಉಪಚಾರ, ಸಾರಿಗೆ ಸೌಕರ್ಯ ಎಂತು?

          ಜನಸಂಖ್ಯಾ ನಿಯಂತ್ರಣವೆಂದರೆ ಯಾರದೇ ಅವನತಿಯಲ್ಲ, ಬದಲಿಗೆ ಜನಸಂಖ್ಯೆ ಏರಿಕೆಯ ಪರಿಣಾಮಗಳನ್ನು ಮನಗಂಡು ಮನಃಪೂರ್ವಕವಾಗಿ ಎಚ್ಚರವಹಿಸುವುದು. ಚಿಕ್ಕ ಕುಟುಂಬವೇ ಚೊಕ್ಕ ಕುಟುಂಬ. ಅಲ್ಲಿ ಇರುವುದನ್ನೇ ಹಂಚಿಕೊಂಡು ಅನುಭವಿಸಿಯಾರು, ನೆಮ್ಮದಿಯದೇ ಅಲ್ಲಿ ಕಾರುಬಾರು. ಗುಣಮಟ್ಟದ ಜೀವನವು ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ಸಾಧ್ಯವೆಂಬ ಅರಿವು ಜಾಗತಿಕವಾಗಿ ಮೂಡಬೇಕು. ನಿಜವೆ, ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಯಶಸ್ವಿಯಾಗಿ ಕಂಡುಕೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ದೆಸೆಯಿಂದ ಸೌರಶಕ್ತಿ, ಪವನಶಕ್ತಿಯ ಕೊಯಿಲುಗಳ ಸುಧಾರಿತ ವಿಧಾನಗಳು ದಕ್ಕಿವೆ. ಆದಾಗ್ಯೂ ಸುಸ್ಥಿರ ಜನಸಂಖ್ಯೆ ಕ್ರಾಂತಿಕಾರಕ ದಿಟ್ಟ ಹೆಜ್ಜೆಗಳಿಂದಲೇ ಸಾಧ್ಯ. 'ಹೆಣ್ಣು ಕುಟುಂಬದ ಕಣ್ಣು' ಎಂಬುದು ಕೇವಲ ಶಕ್ತಿವಾಕ್ಯವಾದರಾಯಿತೇ? ಆಕೆಯ ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕು. ಹೆರುವುದು ಹೆಣ್ಣು. ಹಾಗಾಗಿ ಕುಟುಂಬ ಯೋಜನೆಯ ಬಗ್ಗೆ ಆಕೆಯ ನಿರ್ಧಾರವೇ ಆಖೈರಾಗಬೇಕು.

         ಜನಸಂಖ್ಯೆ ಹೆಚ್ಚಳವು ಜನನ ಮತ್ತು ಮರಣದ ದರಗಳ ನಡುವಿನ ವ್ಯತ್ಯಾಸವನ್ನು ಅವಲಂಬಿಸಿದೆ. ಜನಸಂಖ್ಯಾ ನಿಯಂತ್ರಣವೆಂದರೆ ಜನಸಾಂದ್ರತೆ ನಿಭಾಯಿಸುವ ಕೌಶಲ. ಆಯಾ ದೇಶ ಮತ್ತು ಅದರ ಪರಿಸರದ ದಕ್ಷ ನಿರ್ವಹಣೆ. ಗಮನಿಸಲೇಬೇಕಾದ ಸೂಕ್ಷ್ಮವೊಂದಿದೆ. ಜನಸಾಂದ್ರತೆ ಕಡಿಮೆಯಾದ ಮಾತ್ರಕ್ಕೆ ಬಡತನ ತೊಲಗಿ, ಸಿರಿ ಸಮೃದ್ಧಿ ಇಟ್ಟಾಡೀತೆಂದಲ್ಲ. ಸರ್ವ ಸವಲತ್ತು, ಸಂಪನ್ಮೂಲಗಳು ಜಾಗತಿಕವಾಗಿ ಸಮ ಸಮ ವಿತರಣೆಯ ಹೊರತು ಉದ್ದೇಶ ಕನಸೇ.ದೇಶ, ಜಾತಿ, ಧರ್ಮ, ವರ್ಗಗಳನ್ನೂ ಮೀರಿ ಜನಸಂಖ್ಯೆಯ ನಿಯಂತ್ರಣ ಅತಿ ಜರೂರು. ಉತ್ತಮ ಗುಣಮಟ್ಟದ ಬದುಕಿನಿಂದ ಯಾರೂ ವಂಚಿತ ರಾಗಬಾರದು. ಸಮಪಾಲು, ಸಮಬಾಳಿನ ಸಾಫಲ್ಯಕ್ಕಾಗಿ ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣವಿರಬೇಕು. 'ಸುಧಾರಿತ ನಾಳೆಗೆ ಸಣ್ಣ ಕುಟುಂಬ'- ನಮ್ಮ ಧ್ಯೇಯವಾಗಬೇಕು. ಈ ದಿಸೆಯಲ್ಲಿ ವಿಯೆಟ್ನಾಂ ಒಳ್ಳೆಯ ಮಾದರಿಯಾಗಿದೆ. ಎರಡು ದಶಕಗಳ ಹಿಂದೆ ಅಲ್ಲಿ ಒಂದು ಕುಟುಂಬದಲ್ಲಿ ಹತ್ತು ಮಕ್ಕಳಿದ್ದರೂ ಅತಿಶಯವಾಗಿರಲಿಲ್ಲ. ಆದರೆ ಇಂದು ಕುಟುಂಬಕ್ಕೆ ಒಬ್ಬರು ಅಥವಾ ಇಬ್ಬರು ಮಕ್ಕಳು. ಸಮರ್ಥ ಶಿಕ್ಷಣ, ಉದ್ಯೋಗಾವಕಾಶಗಳಿಂದ ಬದುಕಿನ ಗುಣಮಟ್ಟಏರಿದ ಕಾರಣ ಇದು ಸಾಧ್ಯವಾಯಿತು.

          ಲಂಡನ್ನಿನ 'ಅಂತರರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧಿ' ಸಂಸ್ಥೆಯ ಹಿರಿಯ ತಜ್ಞ ಡಾ. ಡೇವಿಡ್ ಸಾಟರ್ತ್‌ವೈಟ್ ಅವರದು ತುಸು ವಿಭಿನ್ನವಾದ ಅಭಿಪ್ರಾಯ: 'ಹಸಿರುಗ್ರಹಕ್ಕೆ ಜನಸಂಖ್ಯೆಯೇ ಸಮಸ್ಯೆ ನಿಜ. ಆದರೆ ಬಳಕೆದಾರರ ಸಂಖ್ಯೆ ಮತ್ತು ಬಳಸುವ ಪ್ರಮಾಣ, ರೀತಿ ನೀತಿ ಅದಕ್ಕೂ ದೊಡ್ಡ ಸವಾಲು'. ಅವರ ಉದ್ಗಾರ 'ಅಗಿಯುವುದಕ್ಕಿಂತಲೂ ಹೆಚ್ಚಾಗಿ ಕಚ್ಚಬೇಡ' ಎಂಬ ಗಾದೆಗೆ ಸಂವಾದಿಯಾಗಿದೆ.

          ನಾಸಾದ 'ಕೆಪ್ಲರ್ ಕಾರ್ಯಸರಣಿ' ಧರೆಯನ್ನು ಹೋಲುವ ಅನೇಕ ಗ್ರಹಗಳನ್ನು ಗುರುತಿಸಿದೆ. ಆದರೆ ಅವುಗಳ ಬಗ್ಗೆ ಇನ್ನೂ ತಿಳಿಯಬೇಕಿದೆ. ಮೇಲಾಗಿ ಅವು ನೆಚ್ಚಿಕೊಳ್ಳಲಾಗದಷ್ಟು ದೂರ. ಹಾಗಾಗಿ 'ಅನ್ಯ ವಾಸಯೋಗ್ಯ(?) ಆಕಾಶಕಾಯಗಳಿಗೆ ಜಿಗಿತ' ಸನ್ನಿಹಿತ ಪರಿಹಾರವಲ್ಲ. ಭೂಮಿ ನಮಗಿರುವ ಏಕಮಾತ್ರ ಮನೆ. ಅದರ ತಾಳಿಕೆಗೆ ಊನವಾಗದಂತೆ ನಾವು ಬದುಕುವ ಕ್ರಮವನ್ನು ಮತ್ತೆ ಮತ್ತೆ ಪರಿಷ್ಕೃತಗೊಳಿಸಿಕೊಳ್ಳುತ್ತಿರ ಬೇಕು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries